ಬಿಜೆಪಿಯಿಂದ ಚುನಾವಣೆ ಆಯೋಗದ ವರ್ಗಾವಣೆ ನೀತಿಗೆ ಧಕ್ಕೆ: ಸೂಕ್ತ ಕ್ರಮಕ್ಕೆ ಎಎಪಿ ಒತ್ತಾಯ
ಬೆಂಗಳೂರು, ಡಿಸೆಂಬರ್ 13: ರಾಜ್ಯ ಸರ್ಕಾರ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ವರ್ಗಾವಣೆ, ಮರು ವರ್ಗಾವಣೆ ಮಾಡುವ ಕುತಂತ್ರ ಅನುಸರಿಸುತ್ತಿದೆ. ಈ ಮೂಲಕ ಚುನಾವಣಾ ಆಯೋಗ ಹೊರಡಿಸಿರುವ ವರ್ಗಾವಣೆ ನೀತಿಯ ಆಶಯಕ್ಕೆ ಧಕ್ಕೆ ತರುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಈ ಕುರಿತು ಸೋಮವಾರ ರಾಜ್ಯ ಚುನಾವಣಾ ಆಯೋಗಕ್ಕೆ ಎಎಪಿ ಮನವಿ ಸಲ್ಲಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಕ್ರಮಗಳನ್ನು ತಡಯುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗಷ್ಟೇ ವರ್ಗಾವಣೆ ನೀತಿ ಪ್ರಕಟಿಸಿದೆ.
ನೀತಿ ಅನ್ವಯ ಒಂದೇ ಜಿಲ್ಲೆಯಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಚುನಾವಣೆಯೊಂದಿಗೆ ನೇರ ಸಂಪರ್ಕ ಹೊಂದಿರುವ ಅಧಿಕಾರಿಗಳು ಬೇರೆ ಜಿಲ್ಲೆಗೆ ವರ್ಗಾವಣೆ ಆಗಬೇಕಿರುತ್ತದೆ. ಆದರೆ ರಾಜ್ಯ ಸರ್ಕಾರವು ಕುತಂತ್ರದಿಂದ ವರ್ಗಾವಣೆ ನೀತಿಯ ಆಶಯವನ್ನೇ ಬುಡಮೇಲೆ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ತಾತ್ಕಾಲಿಕವಾಗಿ ವರ್ಗಾಯಿಸಿ, ಮತ್ತೆ ಮೊದಲಿದ್ದ ಜಿಲ್ಲೆಗೆ ಮರು ವರ್ಗಾವಣೆ ಮಾಡುತ್ತಿರುವುದು ಕಂಡು ಬಂದಿದೆ. ಈ ಮೂಲಕ ಅವರು ಮೂರು ವರ್ಷದಿಂದ ಒಂದೇ ಕಡೆ ಇಲ್ಲವೆಂದು ಸಾಬೀತುಪಡಿಸಿ, ಅವರನ್ನು ಮೊದಲಿದ್ದ ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ಸರ್ಕಾರದ ಇಂತಹ ಕುತಂತ್ರ ಮಾರ್ಗದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ಬಿಜೆಪಿಯಿಂದ ವರ್ಗಾವಣೆ ಆಕ್ರಮ
ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿಗೆ ಸಂಬಂಧಿಸಿ ಬಿಜೆಪಿಯು ಅಕ್ರಮ ನಡೆಸಿರುವುದು ತನಿಖೆಯಿಂದ ಸಾಬೀತಾಗುವ ಹಂತದಲ್ಲಿದೆ. ಹಣಬಲ, ತೋಳಬಲ ಮತ್ತು ಅಧಿಕಾರ ಬಲ ಬಳಸಿಕೊಂಡು ಬಿಜೆಪಿ ಹಲವು ರೀತಿಯ ಅಕ್ರಮ ನಡೆಸುತ್ತದೆ. ಇಷ್ಟೆಲ್ಲ ಮಾಡಿಯೂ ಚುನಾವಣೆಯಲ್ಲಿ ಸೋತರೆ, ಆಪರೇಷನ್ ಕಮಲವೆಂದು ಮತ್ತೊಂದು ಅಕ್ರಮವನ್ನು ಬಿಜೆಪಿ ಮಾಡುತ್ತದೆ. ಈಗ ಇವುಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ, ಬಿಜೆಪಿ ಸರ್ಕಾರವು ವರ್ಗಾವಣೆಯಲ್ಲಿ ಅಕ್ರಮ ಮಾಡುತ್ತಿದೆ ಎಂದು ಅವರು ವಿವರಿಸಿದರು.
ಪಕ್ಷದ ಮುಖಂಡರಾದ ಬ್ರಿಜೇಶ್ ಕಾಳಪ್ಪ, ಜಗದೀಶ್ ವಿ ಸದಂ, ಬಿ.ಟಿ.ನಾಗಣ್ಣ, ಚನ್ನಪ್ಪಗೌಡ ನೆಲ್ಲೂರು, ಸುರೇಶ್ ರಾಥೋಡ್ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications