ಕರ್ನಾಟಕದ 15-20 ಕ್ಷೇತ್ರದಲ್ಲಿ ಆಮ್ ಆದ್ಮಿ ಸ್ಪರ್ಧೆ
ಬೆಂಗಳೂರು, ಜ.15 : ದೆಹಲಿ ವಿಧಾನಸಭೆ ಚುನಾವಣೆ ಯಶಸ್ಸಿನ ನಂತರ ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಕರ್ನಾಟಕದಲ್ಲಿಯೂ ಪಕ್ಷ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 15-20 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ವಕ್ತಾರ ಮಹಾಂತೇಶ್ ಅರಳಿ, ಪಕ್ಷಕ್ಕೆ ಜನ ಬೆಂಬಲ ಸಿಕ್ಕರೆ ರಾಜ್ಯದ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಸದ್ಯ 10 ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ಅವರು ಹೇಳಿದರು. [ಆಮ್ ಆದ್ಮಿ ಸದಸ್ಯರಾಗುವುದು ಹೇಗೆ]

ಬೆಂಗಳೂರು ನಗರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಳಗಾವಿ, ಗುಲ್ಬರ್ಗ, ತುಮಕೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ 10 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಮಹಾಂತೇಶ್ ಅರಳಿ ಹೇಳಿದರು. ಉಳಿದ ಕ್ಷೇತ್ರಗಳಲ್ಲೂ ಜನ ಬೆಂಬಲ ಸಿಕ್ಕಿದರೆ, ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದರು. [ಆಮ್ ಆದ್ಮಿ ವೆಬ್ ಸೈಟ್ ನೋಡಿ]
ಜೂನ್ 10ರಿಂದ 25ರವರೆಗೆ ದೇಶಾದ್ಯಂತ ಪಕ್ಷದ ನೋಂದಣಿ ಕಾರ್ಯಕ್ರಮ ನಡೆಯುತ್ತಿದೆ. ಐದು ದಿನಗಳಲ್ಲಿ ಕರ್ನಾಟಕದಲ್ಲಿ 1 ಲಕ್ಷ ಮಂದಿ ಪಕ್ಷದ ಸದಸ್ಯರಾಗಿದ್ದಾರೆ ಎಂದು ಮಹಾಂತೇಶ್ ತಿಳಿಸಿದರು. ಸದಸ್ಯತ್ವ ಅಭಿಯಾನ ಮುಗಿದ ಬಳಿಕ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ಎಷ್ಟು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ತೀರ್ಮಾನಿಸಲಿದ್ದೇವೆ ಎಂದರು. [ಕರ್ನಾಟಕದ ಮೇಲೆ ಆಮ್ ಆದ್ಮಿ ಕಣ್ಣು]
ಆಮ್ ಆದ್ಮಿ ಪಕ್ಷಕ್ಕೆ ದೇಶದಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದ್ದು ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಆತಂಕ ಉಂಟಾಗಿದೆ. ಆದ್ದರಿಂದ ಅವುಗಳು ನಮ್ಮ ಕಾರ್ಯವೈಖರಿಯನ್ನು ನಕಲು ಮಾಡಿ ಜನರನ್ನು ಪಕ್ಷದತ್ತ ಸೆಳೆಯುತ್ತಿವೆ ಎಂದು ಅವರು ಆರೋಪಿಸಿದರು. ಕ್ಯಾಪ್ಟನ್ ಗೋಪಿನಾಥ್, ವಿ.ಬಾಲಕೃಷ್ಣನ್ ಮುಂತಾದವರು ನಮ್ಮ ಪಕ್ಷ ಸೇರಿದ್ದು, ನಮಗೆ ಬೆಂಬಲ ನೀಡಿದ್ದಾರೆ ಎಂದು ಮಹಾಂತೇಶ್ ಅರಳಿ ಹೇಳಿದರು.












Click it and Unblock the Notifications