ಕರ್ನಾಟಕ; ಕೋವಿಡ್ ಪರೀಕ್ಷೆಗೆ ಆಧಾರ್, ಮೊಬೈಲ್ ಒಟಿಪಿ ಕಡ್ಡಾಯ
ಬೆಂಗಳೂರು, ಜುಲೈ 27 : ಬೆಂಗಳೂರು ನಗರ ಮತ್ತು ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 96,141ಕ್ಕೆ ಏರಿಕೆಯಾಗಿದೆ. ಕೋವಿಡ್ ಪರೀಕ್ಷೆ ವೇಳೆ ನಕಲಿ ಮೊಬೈಲ್ ನಂಬರ್, ವಿಳಾಸ ನೀಡುತ್ತಿರುವ ಪ್ರಕರಣ ಪತ್ತೆಯಾಗುತ್ತಿದೆ.
Recommended Video
ಮೈಸೂರಿನಲ್ಲಿ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳ ಮೊಬೈಲ್ ನಂಬರ್ ಕೊಟ್ಟು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದ್ದ. ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡಿಸುವಾಗ 4500 ಜನರು ಸುಳ್ಳು ವಿಳಾಸ, ಮೊಬೈಲ್ ನಂಬರ್ ನೀಡಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಹೆಚ್ಚು-ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿದ ವ್ಯಕ್ತಿಗಳನ್ನು ಹುಡುಕುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. 'ರಾಜ್ಯದಲ್ಲಿ ಪ್ರತಿದಿನ 30-40 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಕೆಲವರು ತಪ್ಪು ವಿಳಾಸ, ತಪ್ಪು ಮೊಬೈಲ್ ನಂಬರ್ ಕೊಡುತ್ತಿದ್ದಾರೆ' ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
'ಇನ್ನು ಮುಂದೆ ಕಡ್ಡಾಯವಾಗಿ ಆಧಾರ್, ಐಡಿ ಕಾರ್ಡ್ ತೋರಿಸಿ OTP ಬಂದ ಮೇಲೆ ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ' ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ರಾಜಸ್ಥಾನ ರಾಜ್ಯದಲ್ಲಿ ಈಗಾಗಲೇ ಇದೇ ಮಾದರಿ ಅನುಸರಿಸಲಾಗುತ್ತಿದೆ. ವ್ಯಕ್ತಿಯ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನೋಡಿದ ಬಳಿಕವೇ ಕೋವಿಡ್ -19 ಪರೀಕ್ಷೆ ಮಾಡಲಾಗುತ್ತಿದೆ.
ಹೆಚ್ಚು ಕೋವಿಡ್ ಟೆಸ್ಟ್ ಮಾಡಿದರಷ್ಟೇ ಕೊರೊನಾ ನಿಯಂತ್ರಣ ಸುಲಭವಾಗುತ್ತದೆ. ರಾಜ್ಯದಲ್ಲಿ ಪ್ರತಿದಿನ 30-40 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಕೆಲವರು ತಪ್ಪು ವಿಳಾಸ, ತಪ್ಪು ಮೊಬೈಲ್ ನಂಬರ್ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಡ್ಡಾಯವಾಗಿ ಆಧಾರ್, ಐಡಿ ಕಾರ್ಡ್ ತೋರಿಸಿ OTP ಬಂದ ಮೇಲೆ ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ.
— Dr Sudhakar K (@mla_sudhakar) July 27, 2020
ಕೆಲವು ವ್ಯಕ್ತಿಗಳು ಕ್ವಾರಂಟೈನ್‌ಗೆ ಹೋಗುವುದನ್ನು ತಡೆಯಲು, ಮನೆಯನ್ನು ಸೀಲ್ ಡೌನ್ ಮಾಡುವುದನ್ನು ತಪ್ಪಿಸಲು ನಕಲಿ ವಿಳಾಸ, ಮೊಬೈಲ್ ನಂಬರ್ ನೀಡುತ್ತಿದ್ದಾರೆ. ಒಂದು ವೇಳೆ ಇವರಿಗೆ ಸೋಂಕು ಇರುವುದು ಖಚಿತವಾದರೆ ಅವರನ್ನು ಹುಡುಕುವುದು ಕಷ್ಟವಾಗಲಿದೆ.












Click it and Unblock the Notifications