Second Airport: ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ: ಮಹತ್ವದ ಮಾಹಿತಿ ನೀಡಿದ ಡಿ ಕೆ ಶಿವಕುಮಾರ್
ಬೆಂಗಳೂರು, ಜೂನ್ 22: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರ ಹೇಳಿಕೆ ನಿಜ. 2032ರ ವೇಳೆಗೆ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಆಗಬೇಕು ಎಂಬ ಪ್ರಸ್ತಾಪ ಸಲ್ಲಿಸಲಾಗಿದೆ. ಪಕ್ಕದ ರಾಜ್ಯಗಳು ಈ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಾವು ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಟ್ರಾಫಿಕ್ ಬೇರೆ ರಾಜ್ಯದ ಪಾಲಾಗಬಾರದು ಎಂಬ ಉದ್ದೇಶದಿಂದ ಈ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಸ್ಕೈಡೆಕ್ ನಿರ್ಮಾಣ ವಿಚಾರವಾಗಿ ನಾವು ಕೆಲವು ಜಾಗ ಶಿಫಾರಸ್ಸು ಮಾಡಿದ್ದೆವು. ಆದರೆ ಇಂತಿಷ್ಟು ವ್ಯಾಪ್ತಿಯಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬೇರೆ ಮೂರ್ನಾಲ್ಕು ಕಡೆಗಳಲ್ಲಿ ಜಾಗ ನೋಡುತ್ತಿದ್ದೇವೆ ಎಂದು ಹೇಳಿದರು.

ಆದಾಯ ಮೂಲ ಗುರುತಿಸಲು ವಿದೇಶ ಕಂಪನಿಗೆ ಟೆಂಡರ್ ನೀಡಿರುವ ಬಗ್ಗೆ ಬಿಜೆಪಿ ಟೀಕೆ ಮಾಡಿರುವ ಕುರಿತು ಮಾತನಾಡಿ, ವಿದೇಶಿ ಕಂಪನಿಗಳು ಬೇಡ, ವಿಧಾನಸಭೆ ಅಧಿವೇಶನದಲ್ಲಿ ಅವರಿಗೆ ಸಮಯ ಸಿಗುತ್ತದೆ. ಅವರೇ ನಮಗೆ ಆದಾಯ ಮೂಲ ಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡಿದರೆ ಬಹಳ ಒಳ್ಳೆಯದು ಎಂದರು.
ಮುಂದಿನ ಒಂದು ವಾರದೊಳಗೆ ಜಾಹೀರಾತು ನೀತಿಯ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗುವುದು. ಕರಡು ಪ್ರತಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಜಾಹೀರಾತು ನೀತಿ ಬಾಕಿ ಉಳಿದಿತ್ತು. ಪ್ರಸ್ತುತ ಸಂಘ, ಸಂಸ್ಥೆಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
60 ಅಡಿಗಿಂತ ಹೆಚ್ಚು ಅಗಲ ಇರುವ ರಸ್ತೆಗಳಲ್ಲಿ 'ಗ್ರೂಪ್ ಪ್ಯಾಕೇಜ್' ತಯಾರಿಸಿ ಅವಕಾಶ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹಿರಾತು ನೀಡಲು ಅವಕಾಶ ನೀಡಲಾಗುವುದು. ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಬಾಡಿಗೆ ನೀಡಬಹುದು.
ಕಟ್ಟಡಗಳ ವಿಸ್ತೀರ್ಣ, ಎತ್ತರಕ್ಕೆ ತಕ್ಕಂತೆ ಯೂನಿಫಾರ್ಮಿಟಿ ತರಲಾಗುವುದು. ಮನಬಂದಂತೆ ಹಾಕಲು ಅವಕಾಶವಿಲ್ಲ. ಫಲಕಗಳನ್ನು ಮಾಡಲು ಯಾವ ಗುಣಮಟ್ಟದ ವಸ್ತು ಬಳಸಬೇಕು ಎಂದು ನಂತರ ತಿಳಿಸಲಾಗುವುದು. ಸರ್ಕಾರದಲ್ಲಿ ಇರುವ ಮೀಸಲಾತಿಗೆ ಅನುಗುಣವಾಗಿ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಹಿಂದಿನ ಸರ್ಕಾರ ಒಂದಷ್ಟು ಅವಕಾಶ ನೀಡಿದ್ದು ಕಾನೂನು ಪ್ರಕಾರವಾಗಿ ಇದ್ದರೆ ರಕ್ಷಣೆ ಮಾಡಲಾಗುವುದು. ಏನೂ ಮಾಡದೆ ಇದ್ದವರನ್ನು ಕಾನೂನಿನ ಪ್ರಕಾರ ವಜಾ ಮಾಡಲಾಗುವುದು.
60 ಅಡಿಗಿಂತ ರಸ್ತೆ ಕಡಿಮೆ ಇದ್ದು, ಕಮರ್ಷಿಯಲ್ ವಲಯ ಎಂದು ಗುರುತಿಸಿದ್ದರೆ ಅಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಲಾಗುವುದು. ಜನಸಾಂದ್ರತೆ ಹಾಗು ವಹಿವಾಟು ಹೆಚ್ಚಿರುವ ಕಡೆ ಅವಕಾಶ ನೀಡಲಾಗುವುದು.
ಸರ್ಕಾರಕ್ಕೆ ಹಣ ಬಾಕಿ ಉಳಿಸಿಕೊಂಡಿರುವ, ದಾವೆ ಹೂಡಿರುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಯವುದಿಲ್ಲ. ನಾವು ಹೇಗೆ ಚುನಾವಣೆಗೆ ನಿಲ್ಲುವಾಗ ಯಾವುದೇ ಬಾಕಿಗಳನ್ನು ಉಳಿಸಿಕೊಳ್ಳದೆ ಇರುತ್ತೇವೆಯೆ, ಅದೇ ರೀತಿ ಇಲ್ಲಿ ಭಾಗವಹಿಸುವವರು ಎಲ್ಲಾ ಬಾಕಿಗಳನ್ನು ಕಟ್ಟಬೇಕು.
ಒಂದಷ್ಟು ಪ್ರಕರಣಗಳು ನ್ಯಾಯಲಯದಲ್ಲಿವೆ ಎಂದಾಗ "ಆ ಪ್ರಕರಣಗಳಿಗೆ ನಾವು ಏನು ಮಾಡಲು ಆಗುವುದಿಲ್ಲ. ಅಲ್ಲಿ ತೀರ್ಮಾನವಾದ ನಂತರ ಬಗೆಹರಿಸಬಹುದು. ಜೊತೆಗೆ ನ್ಯಾಯಾಲಯವು ಒಂದಷ್ಟು ಸೂಚನೆಗಳನ್ನು ನೀಡಿತ್ತು ಅದನ್ನು ಗಣನೆಗೆ ತೆಗೆದುಕೊಂಡು ನಿಯಮಗಳನ್ನು ರೂಪಿಸಲಾಗಿದೆ. ಮೆಟ್ರೋ ಒಳಗೆ ಆ ನಿಗಮ ನೋಡಿಕೊಳ್ಳುತ್ತದೆ. ಹೊರಗಡೆ ಪಾಲಿಕೆ ಮತ್ತು ಮೆಟ್ರೋ ಸಹಭಾಗಿತ್ವದಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಲಾಗುವುದು" ಎಂದು ಹೇಳಿದರು.
ಸುಮಾರು 600 ಕೋಟಿ ಜಾಹೀರಾತು ಹಣ ಬಾಕಿ ಇದೆ ಇದಕ್ಕೆ ಪರಿಹಾರ ಏನು ಎಂದು ಕೇಳಿದಾಗ " ಎಲ್ಲವನ್ನು ವಸೂಲಿ ಮಾಡಲಾಗುವುದು, ಹಾಗೂ ಬಾಕಿ ಉಳಿಸಿಕೊಂಡವರು ಭಾಗವಹಿಸಲು ಅವಕಾಶ ನೀಡುವುದಿಲ್ಲ" ಎಂದರು. ವಾರ್ಷಿಕ ಆದಾಯ ಎಷ್ಟು ನಿರೀಕ್ಷೆ ಮಾಡಲಾಗುತ್ತಿದೆ ಎಂದಾಗ "ಇನ್ನು ಮಗುನೇ ಹುಟ್ಟಿಲ್ಲ, ಮೊದಲೇ ಬಟ್ಟೆಯನ್ನು ಏಕೆ ಹೊಲೆಸಲಿ ಎಂದು ಮರು ಪ್ರಶ್ನಿಸಿದರು.












Click it and Unblock the Notifications