ಹಿಜಾಬ್ ತೀರ್ಪು ಪ್ರಶ್ನಿಸಿ SC ಮೆಟ್ಟಿಲೇರಿದ 66 ವರ್ಷದ ಮುಸ್ಲಿಂ ಮಹಿಳೆ
ಬೆಂಗಳೂರು, ಮಾರ್ಚ್ 17: ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಉಡುಪಿಯ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎದ್ದಿದ್ದ ಪ್ರಮುಖ ನಾಲ್ಕು ಪ್ರಶ್ನೆಗೆ ನ್ಯಾಯಾಲಯ ತನ್ನ ಆದೇಶದಲ್ಲಿ ಪ್ರತಿಕ್ರಿಯೆ ನೀಡಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ತ್ರಿ ಸದಸ್ಯ ಪೀಠ ತೀರ್ಪು ಪ್ರಕಟಿಸಿತು. ಈ ಮೂಲಕ ಕರ್ನಾಟಕದಲ್ಲಿ ನಡೆಯುತ್ತಿದ್ದ ಹಿಜಾಬ್ ಚರ್ಚೆಗೆ ತೆರೆ ಬಿದ್ದಿದೆ. 12 ದಿನಗಳ ಕಾಲ ನಿರಂತರವಾಗಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಫೆಬ್ರವರಿ 25ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ತೀರ್ಪು ಪ್ರಕಟಿಸಿದೆ.
ಈ ತೀರ್ಪಿನಲ್ಲಿ ನೀಡಿರುವ ''ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆ ಅಲ್ಲ'' ಎನ್ನುವ ಅಂಶದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ, 66 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾಲೇಜು ಅಂಗಳದಲ್ಲಿ ಹಿಜಾಬ್ ಧಾರಣೆ ನಿಷೇಧಿಸುವ ಅಧಿಕಾರವನ್ನು ಕಾಲೇಜುಗಳಿಗೆ ನೀಡಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಲಾಗಿದೆ.

ಸಜೀದಾ ಬೇಗಂ ಎಂಬುವರು ಈ ಮನವಿ ಸಲ್ಲಿಸಿದ್ದು, ಅವರು ಪ್ರಕರಣದಲ್ಲಿ ಪಕ್ಷಕಕಾರರನ್ನಾಗಿ ಸೇರಿಸಿಕೊಳ್ಳುವಂತೆ ಕೋರಿ ಈ ಹಿಂದೆ ಹೈಕೋರ್ಟ್‌ಗೆ ಕೂಡ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ಹೈಕೋರ್ಟ್‌ಗೆ ಮನವಿ ಮಾಡಿದ್ದರೂ ಸ್ಪಂದಿಸಲಿಲ್ಲ. ವಾದ ಮಂಡಿಸಲು ಅವಕಾಶ ನೀಡಲಿಲ್ಲ. ಇದರಿಂದಾಗಿ ʼಮೌಖಿಕತೆಯ ತತ್ವʼಕ್ಕೆ ಧಕ್ಕೆ ಒದಗಿದೆ. ಹದಿ ಹರೆಯದ ಹುಡುಗಿಯರು ಶಿಕ್ಷಣ ಪಡೆಯಲು ತೆರಳಿದಾಗ ತಮ್ಮನ್ನು ತಾವು ವಸ್ತ್ರದಿಂದ ಮುಚ್ಚಿಕೊಂಡರೆ ಇದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಉಂಟಾಗದು ಎಂದು ಸಜೀದಾ ಬೇಗಂ ವಾದಿಸಿದ್ದಾರೆ.
ಸಂವಿಧಾನದ 14, 15, 17, 19 ಮತ್ತು 21 ನೇ ವಿಧಿಗಳು ಹಿಜಾಬ್ ಧರಿಸುವುದು ಹಕ್ಕು ಎನ್ನುತ್ತವೆ. 25ನೇ ವಿಧಿಯಡಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎನ್ನುವುದು ಕೊನೆಯ ಆಯ್ಕೆಯಾಗುತ್ತದೆ. ಈ ಪ್ರಕರಣದಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯ ಸಮಸ್ಯೆ ಉದ್ಭವಿಸದು ಎಂಬುದನ್ನು ಹೈಕೋರ್ಟ್ ನಿರ್ಧರಿಸಿಲ್ಲ.
"ಸರ್ಕಾರಿ ಆದೇಶ ಹಿಜಾಬ್ ನಿಷೇಧಿಸುವುದಿಲ್ಲವಾದ್ದರಿಂದ ಹೈಕೋರ್ಟ್ ಆಡಳಿತತಾತ್ಮಕ ಕಾನೂನಿನ ಸರಳ ಅಂಶದ ಮೇಲೆ ಮಾತ್ರ ಸಮಸ್ಯೆಯನ್ನು ನಿರ್ಧರಿಸಬೇಕಿತ್ತು" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹುಡುಗಿಯರ ಘನತೆ ಮತ್ತು ಧಾರ್ಮಿಕ ಮೌಲ್ಯಗಳಿಗೆ ಸಂಬಂಧಿಸಿರುವ ಹಿಜಾಬ್ ತೆಗೆಯುವಂತೆ ಒತ್ತಾಯಿಸುವುದು ಸರ್ಕಾರಿ ಅನುಮೋದಿತ ಅಪಮಾನ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಕೀಲರಾದ ತಲ್ಹಾ ಅಬ್ದುಲ್ ರಹಮಾನ್, ಮಹಮ್ಮದ್ ಅಫೀಫ್, ಬಸವ ಪ್ರಸಾದ್ ಕುನಾಳೆ, ಎಂ ಶಾಜ್ ಖಾನ್ ಮತ್ತು ಹರ್ಷವರ್ಧನ್ ಕೇಡಿಯಾ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.












Click it and Unblock the Notifications