ಪ್ರೇಮ ನಿವೇದನೆ ನಿರಾಕರಿಸಿದ ಹುಬ್ಬಳ್ಳಿ ಹುಡುಗಿಯ ಹತ್ಯೆ
ಹುಬ್ಬಳ್ಳಿ, ನವೆಂಬರ್, 14 : ಹೋಟೆಲ್ ನಲ್ಲಿ ಕೆಲಸಮಾಡುತ್ತಿದ್ದ ಯುವಕನೊಬ್ಬ ಮದುವೆಯಾಗಲು ಒಪ್ಪದ ತನ್ನ ಸಹೋದ್ಯೋಗಿಯನ್ನು ಚಾಕುವಿನಿಂದ ಶುಕ್ರವಾರ ಮಧ್ಯಾಹ್ನ ಇರಿದು ಕೊಂದಿದ್ದಾನೆ.
ಹೋಟೆಲ್ ನಲ್ಲಿ ಹೆಲ್ಪರ್ ಆಗಿ ಕೆಲಸಮಾಡುತ್ತಿದ್ದ ಹಳೆಹುಬ್ಬಳ್ಳಿ ಟಿಪ್ಪು ನಗರದ ನಿವಾಸಿ ಅಪ್ರಾಪ್ತೆ ಅಶ್ವಿನಿ (16) ಕೊಲೆಯಾದವಳು. ಅದೇ ಹೋಟೆಲ್ ನಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ ವಿನಾಯಕ (20) ಆರೋಪಿ. ಈತ ಧಾರವಾಡದ ಮಾಳಪುರದವನು ಎಂದು ತಿಳಿದು ಬಂದಿದೆ.[ಪ್ರೀತ್ಸೋಕೆ ಒಲ್ಲೆ ಎಂದವಳ ಬೆರಳು ಕತ್ತರಿಸಿದ ಭಗ್ನಪ್ರೇಮಿ]

ಘಟನೆಯ ವಿವರ:
ಸುಮಾರು ಒಂದು ವರೆ ವರ್ಷದಿಂದ ಅಶ್ವಿನಿ ಮತ್ತು ವಿನಾಯಕ ಒಂದೇ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಯಾವಾಗಲೂ ಚಟುವಟಿಕೆಯಿಂದ ಇರುತ್ತಿದ್ದ ಅಶ್ವಿನಿಗೆ ವಿನಾಯಕ ಪ್ರೀತಿಸುವಂತೆ ಕೇಳಿದ್ದನು. ಈಕೆಗೆ ಬೇರೆ ಕಡೆ ವಿವಾಹ ನಿಶ್ಚಯವಾದ ಕಾರಣ ವಿನಾಯಕನ ಪ್ರೀತಿಯನ್ನು ನಿರಾಕರಿಸುತ್ತಾ ಬಂದಿದ್ದಳು.[ಬಸ್ ಟಿಕೇಟ್ ನಲ್ಲೇ ಪ್ರೇಮ ಪತ್ರ ಬರೆದ ಕಂಡಕ್ಟರ್!]
ಪ್ರೀತಿ ಹಾಗೂ ಮದುವೆ ವಿಚಾರವಾಗಿ ಅಶ್ವಿನಿ ಮತ್ತು ವಿನಾಯಕನ ನಡುವೆ ಶುಕ್ರವಾರ ವಾಗ್ವಾದ ನಡೆದಿದೆ. ಆಗಲೂ ಆತನ ಅಭಿಪ್ರಾಯವನ್ನು ತಿರಸ್ಕರಿಸಿದ್ದಾಳೆ. ಆಗ ಆಕೆ ಮೇಲೆ ಕೋಪಗೊಂಡ ಯುವಕ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರಗಾಯವಾದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.
ಇದರಿಂದ ಹೆದರಿದ ವಿನಾಯಕ ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications