ಮಹಿಳೆಯರ ಏಳಿಗೆಗಾಗಿ ಓನಕೆ ಓಬವ್ವನ ಹೆಸರಲ್ಲಿ ನಿಗಮ ಸ್ಥಾಪನೆ: ಸಿಎಂ
ಚಿತ್ರದುರ್ಗ, ಡಿಸೆಂಬರ್ 18: ಕರ್ನಾಟಕದ ಮಹಿಳೆಯರ ಏಳಿಗೆಗಾಗಿ ಮುಂದಿನ ಆಯವ್ಯಯದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗವುದು. ಅದರಡಿ ಒನಕೆ ಓಬವ್ವನವರ ಹೆಸರಿನಲ್ಲಿ ನಿಗಮ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ವೀರವನಿತೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಓಬವ್ವನವರ ಹೆಸರಿನಲ್ಲಿ ಮಹಿಳಾ ಕಾಲೇಜ ಅನ್ನು ಸರ್ಕಾರ ಸ್ಥಾಪಿಸಲಿದೆ. ಒನಕೆ ಓಬವ್ವ ಟ್ರಸ್ಟ್ ಹೆಸರಿನಲ್ಲಿ ಸಮುದಾಯಕ್ಕೆ 80 ಎಕರೆ ಜಮೀನನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಓಬವ್ವನ ಜೀವನ ಸಾಧನೆಗಳ ಸಂಶೋಧನೆಗಾಗಿ ವಿಶ್ವವಿದ್ಯಾಲಯಲದಲ್ಲಿ ಅಧ್ಯಯನ ಪೀಠ ರಚಿಸಲಾಗುವುದು. ಸಮುದಾಯಕ್ಕೆ ಉದ್ಯೋಗ, ಭೂ ಒಡೆತನ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸ್ವಯಂ ಉದ್ಯೋಗ ಯೋಜನೆ ಜಾರಿ
ಕರ್ನಾಟಕದ ಬೆಳವಣಿಗೆಯಲ್ಲಿ ಎಲ್ಲ ಸಮುದಾಯಗಳು ಕೊಡುಗೆ ನೀಡಿವೆ. ಸಮುದಾಯಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರ ಒತ್ತು ನೀಡುತ್ತದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ 100 ಅಂಬೇಡ್ಕರ್ ಹಾಸ್ಟೆಲ್ ಗಳು, 50 ಕನಕದಾಸ ಹಾಸ್ಟೆಲ್, ಉದ್ಯೋಗ ಸೃಷ್ಟಿಯಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ 100 ಯುವಕರಿಗೆ ಸ್ವಯಂ ಉದ್ಯೋಗ ಯೋಜನೆ ಜಾರಿ ಮಾಡಲಾಗುತ್ತಿದೆ. ದುರ್ಬಲ ವರ್ಗಗಳ ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣ ಮಾಡುವುದು ಸರ್ಕಾರದ ಧ್ಯೇಯವಾಗಿದೆ ಎಂದರು.
ಓಬವ್ವ ತತ್ವಾದರ್ಶ ಯುವಪೀಳಿಗೆಗೆ ತಿಳಿಸಬೇಕು
ಯಾವುದೇ ಅಧಿಕಾರವಿಲ್ಲದೇ ಸಾಧನೆ ಮಾಡುವುದು ಅಪರೂಪದ ಗುಣ. ಒನಕೆ ಓಬವ್ವ ತನ್ನ ಸರ್ವಸ್ವವನ್ನು ದೇಶಕ್ಕಾಗಿ ಅರ್ಪಿಸಿದ ಚರಿತ್ರೆಯನ್ನು ಕೇಳಿಕೊಂಡು ಬೆಳೆದಿದ್ದೇವೆ. ಪತ್ನಿ ಧರ್ಮವನ್ನು ಅನುಸರಿಸಿದ ಓಬವ್ವ ಕೋಟೆಯನ್ನು ಸುತ್ತುವರಿದ ಶತ್ರುಗಳನ್ನು ಸಂಹರಿಸಿ, ಹಿಮ್ಮೆಟ್ಟಿಸಿದ ದಿಟ್ಟಮಹಿಳೆ. ಕರ್ತವ್ಯನಿಷ್ಠೆ, ದೇಶಪ್ರೇಮ, ತ್ಯಾಗ ಮನೋಭಾವಗಳು ಮೆರೆದವರು ಅವರು. ಅಂತಹ ಒನಕೆ ಓಬವ್ವನ ತ್ಯಾಗ ಆದರ್ಶಗಳು ಇಂದಿನ ಯುವಪೀಳಿಗೆಗೆ ತಿಳಿಸಬೇಕೆಂಬ ಉದ್ದೇಶದಿಂದ ಒನಕೆ ಓಬವ್ವನ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಇಂದು ಅವಕಾಶಗಳ ಕೊರತೆ ಇದೆ
ಬುದ್ಧ, ಬಸವ,ಅಂಬೇಡ್ಕರ್, ವಾಲ್ಮೀಕಿಯವರ ವಿಚಾರಧಾರೆಯನ್ನು ನಾನು ನಂಬಿದವನು. ಇವರೆಲ್ಲ ವಿಚಾರಧಾರೆಗಳೇ ಸರ್ಕಾರದ ನಿರ್ಣಯಗಳಿಗೆ ಪ್ರೇರಣೆ. ವಿವಿಧ ಜಾತಿಮತಗಳ ನಡುವೆಯೂ ಪ್ರಜಾಪ್ರಭುತ್ವ ಉಳಿಯಲು ಭಾರತದ ಸಂವಿಧಾನವೇ ಕಾರಣ. ಇವರ ಆದರ್ಶಗಳನ್ನು ಪಾಲಿಸುವವನೇ ನಿಜವಾದ ದೇಶಭಕ್ತ. ಈಗ ಸಾಮರ್ಥ್ಯಕ್ಕಿಂತ ಕೊರತೆ ಇಲ್ಲ ಅವಕಾಶಗಳ ಕೊರತೆಯಿದೆ. ಸಮಾನ ಅವಕಾಶ ದೊರೆಯಬೇಕಿದೆ. ಜನರ ರಾಜಕಾರಣ ಮಾಡಿದರೆ ಸಮುದಾಯದ ಜನ ಕೈಬಿಡುವುದಿಲ್ಲ ಎಂದರು.
ಈ ವೇಳೆ ಬಸವ ನಾಗದೇವ ಸ್ವಾಮೀಜಿ, ಜ್ಞಾನ ಪ್ರಕಾಶ್ ಸ್ವಾಮೀಜಿ, ವಿಜಯ ಮಹಾಂತೇಶ ಸ್ವಾಮೀಜಿ, ಬಸವಲಿಂಗ ಮೂರ್ತಿ ಸ್ವಾಮೀಜಿ, ಶಾಸಕರಾದ ನೆಹರು ಒಲೆಕರ್, ತಿಪ್ಪಾರೆಡ್ಡಿ, ಚಂದ್ರಪ್ಪ, ಗೂಳಿಹಟ್ಟಿ ಶೇಖರ್ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications