ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ ಮಂಡ್ಯದಲ್ಲಿ ಆತ್ಮಹತ್ಯೆ
ಮಂಡ್ಯ, ಡಿಸೆಂಬರ್, 23: ಪತ್ನಿ ಮತ್ತು ಆಕೆಯ ಪ್ರಿಯಕರ ಹಲ್ಲೆ ನಡೆಸಿದ ಪರಿಣಾಮ ಬೇಸತ್ತ ಪತಿ ಮಂಡ್ಯದ ಚಿಕ್ಕೇಗೌಡನದೊಡ್ಡಿಯ ತನ್ನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದ ಕೆ.ಸುರೇಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಒಂದೂವರೆ ವರ್ಷದ ಹಿಂದೆ ಎಚ್.ಎಸ್.ಕುಮಾರಿ ಅಲಿಯಾಸ್ ಸೌಮ್ಯ ಎಂಬಾಕೆಯನ್ನು ಮದುವೆಯಾಗಿ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದನು.[ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]

ಈ ನಡುವೆ ಸುರೇಶ್ ಕುಮಾರ್ ಪತ್ನಿ ಸೌಮ್ಯಳಿಗೆ ಕಾರು ಚಾಲಕನ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಅನೈತಿಕ ಸಂಬಂಧ ಬೆಳೆದಿತ್ತು. ಈ ವಿಚಾರ ಪತಿಗೆ ತಿಳಿದು ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ ಸೌಮ್ಯ ಮಾತ್ರ ಸಂಬಂಧವನ್ನು ಮುಂದುವರೆಸಿದ್ದಳು.
ಸೌಮ್ಯ ತನ್ನ ಪ್ರಿಯಕರನ ಜತೆ ಸೇರಿ ಸುರೇಶ್ ಕುಮಾರ್ ಮೇಲೆ ಡಿಸೆಂಬರ್.20ರಂದು ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಮಾಡುವ ಬೆದರಿಕೆ ಹಾಕಿದ್ದಳು. ಈ ಎಲ್ಲಾ ಘಟನೆಗಳಿಂದ ಬೇಸತ್ತ ಪತಿ ಅಂದು ಸಂಜೆಯೇ ಮಂಡ್ಯ ಚಿಕ್ಕೇಗೌಡನ ದೊಡ್ಡಿಯ ತನ್ನ ಮನೆಗೆ ಬಂದಿದ್ದಾನೆ. ಆದರೆ ಆತ ಯಾವ ವಿಷಯವನ್ನು ಹೆತ್ತವರಿಗೆ ತಿಳಿಸಿರಲಿಲ್ಲ.[ಭಾರತ ಇನ್ನೆಷ್ಟು ದಿನ ಜಾತ್ಯತೀತವಾಗಿರುತ್ತೆ? : ಸುಪ್ರೀಂ]
ಡೆತ್ ನೋಟ್ ನಲ್ಲಿ ಏನಿದೆ?
ಡಿ.21ರಂದು ಬೆಳಿಗ್ಗಿನಿಂದಲೇ ಮೌನವಾಗಿಯೇ ಇದ್ದ ಆತ ಸಂಜೆ ಸಮಯದಲ್ಲಿ ಮನೆಯವರು ದೇವಸ್ಥಾನಕ್ಕೆ ತೆರಳಿದ ಸಂದರ್ಭ ನನ್ನ ಪತ್ನಿ ನನಗೆ ಮೋಸ ಮಾಡಿ ಇನ್ನೊಬ್ಬನ ಜೊತೆ ಸಂಬಂಧ ಹೊಂದಿದ್ದಾಳೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ. ಆದರೆ, ಅವಳು ಪ್ರಿಯಕರನ ಜೊತೆ ಸೇರಿ ನನ್ನನ್ನೇ ಕೊಲೆ ಮಾಡಲು ಯತ್ನಿಸಿದಳು.

ಮನೆಯಿಂದ ಹೊಡೆದು ಓಡಿಸಿದಳು. ಆದರೂ ಅವಳೊಂದಿಗೆ ಬದುಕಲು ಇಷ್ಟ. ಅವಳೇ ಬೇಡವೆಂದ ಮೇಲೆ ನಾನು ಸಾವಿನ ನಿರ್ಧಾರ ಮಾಡಿದೆ. ನನ್ನ ಸಾವಿಗೆ ನನ್ನ ಹೆಂಡತಿ ಸೌಮ್ಯ, ಆಕೆಯ ಪ್ರಿಯಕರ, ನನ್ನ ಅತ್ತೆ ಜಯಮ್ಮ ಈ ಮೂವರೇ ಕಾರಣ ಎಂದು ಬರೆದು ನೇಣಿಗೆ ಶರಣಾಗಿದ್ದಾನೆ.[ಗಂಡಿಗೂ ಭಾವನೆಗಳಿರುತ್ತವೆ ಎಂದೇಕೆ ಹೆಂಡತಿಗೆ ಅರ್ಥವಾಗುವುದಿಲ್ಲ?]
ವಿಷಯ ತಿಳಿದು ಸ್ಥಳಕ್ಕೆ ಬಂದ ಪೂರ್ವ ಪೊಲೀಸ್ ಠಾಣೆ ಪೊಲೀಸರು ಶವದ ಮಹಜರು ನಡೆಸಿ, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮೃತನ ತಂದೆ ನಾಗರಾಜು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications