ಹೊಸದಾಗಿ ಆಯ್ಕೆಯಾದ 97% ಶಾಸಕರು ಕೋಟ್ಯಾಧಿಪತಿಗಳು, 55% ಕ್ರಿಮಿನಲ್ ಆರೋಪಿಗಳು!
ಬೆಂಗಳೂರು, ಮೇ. 18: ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವಿಶ್ಲೇಷಣೆಯ ಪ್ರಕಾರ ಹೊಸದಾಗಿ ಚುನಾಯಿತ ಕರ್ನಾಟಕ ವಿಧಾನಸಭೆಯಲ್ಲಿ, ವಿಜೇತ ಅಭ್ಯರ್ಥಿಗಳಲ್ಲಿ 97 ಪ್ರತಿಶತದಷ್ಟು ಕೋಟ್ಯಾಧಿಪತಿಗಳು ಮತ್ತು ಅವರ ಸರಾಸರಿ ಘೋಷಿತ ಆಸ್ತಿ 64.39 ಕೋಟಿ ರೂಪಾಯಿಯಾಗಿದೆ. ಇದರ ಜೊತೆಗೆ 55% ಕ್ರಿಮಿನಲ್ ಆರೋಪ ಹೊಂದಿರುವವರು ವಿಧಾನಸಭೆ ಪ್ರವೇಶಿಸಲಿದ್ದಾರೆ.
"223 ವಿಜೇತ ಅಭ್ಯರ್ಥಿಗಳಲ್ಲಿ 217 (ಶೇ. 97) ಕೋಟ್ಯಾಧಿಪತಿಗಳು. 2018 ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ನಂತರ ವಿಶ್ಲೇಷಿಸಿದ 221 ಶಾಸಕರಲ್ಲಿ 215 (ಶೇ. 97) ಕೋಟ್ಯಾಧಿಪತಿಗಳಾಗಿದ್ದರು" ಎಂದು ವರದಿ ತಿಳಿಸಿದೆ. ಈ ವರದಿಯು ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ, ಆರ್ಥಿಕ ಸ್ಥಿತಿ, ಶಿಕ್ಷಣ, ವಿಜೇತರ ಲಿಂಗ ಮತ್ತು ಇತರ ವಿವರಗಳನ್ನು ವಿಶ್ಲೇಷಣೆ ಮಾಡಿದೆ.

ಶಾಸಕರ ಸರಾಸರಿ ಆಸ್ತಿ 2018 ರಲ್ಲಿ 34.59 ಕೋಟಿಯಿಂದ 2013 ರಲ್ಲಿ 64.39 ಕೋಟಿಗೆ ಅಂದರೆ ಸುಮಾರು 30 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್‌ನ, 134 ವಿಜೇತರಲ್ಲಿ 132 ಮಂದಿ (ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದ್ದಾರೆ) ಕೋಟ್ಯಾಧಿಪತಿಗಳು. ಇವರು ಸರಾಸರಿ 67.13 ಕೋಟಿ ಘೋಷಿತ ಸಂಪತ್ತು ಹೊಂದಿದ್ದಾರೆ.
ಇನ್ನು, ಬಿಜೆಪಿಗೆ ಸಂಬಂಧಿಸಿದಂತೆ, ಅದರ 66 ವಿಜೇತರಲ್ಲಿ 63 ಮಂದಿ ಒಂದು ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಇವರ ಸರಾಸರಿ ಆಸ್ತಿ 44.36 ಕೋಟಿ ರೂ. ಜಾತ್ಯತೀತ ಜನತಾ ದಳದ 19 ವಿಜೇತರಲ್ಲಿ 18 ಮಂದಿ ಕೋಟ್ಯಾಧಿಪತಿಗಳಾಗಿದ್ದು, ಸರಾಸರಿ 46.01 ಕೋಟಿ ಆಸ್ತಿ ಹೊಂದಿದ್ದಾರೆ.
ವರದಿಯ ಪ್ರಕಾರ, ಇಬ್ಬರು ವಿಜೇತ ಅಭ್ಯರ್ಥಿಗಳು ಮಾತ್ರ 50 ಲಕ್ಷ ರೂ.ಗಿಂತ ಕಡಿಮೆ, ಹತ್ತು ಮಂದಿ ರೂ.50 ಲಕ್ಷದಿಂದ 2 ಕೋಟಿ ರೂ., 31 ಮಂದಿ 2 ಕೋಟಿ ರೂ.ನಿಂದ ರೂ.5 ಕೋಟಿ ರೂ. ಮತ್ತು 180 ಅಭ್ಯರ್ಥಿಗಳು 5 ಕೋಟಿ ರೂ.ಗಿಂತ ಹೆಚ್ಚು ಆಸ್ತಿಯನ್ನು ಘೋಷಿಸಿದ್ದಾರೆ.

ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ ಕೆ ಶಿವಕುಮಾರ್ 1,413 ಕೋಟಿ ಆಸ್ತಿ ಘೊಷಿಸಿದ್ದು, ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಗೌರಿಬಿದನೂರಿನ ಸ್ವತಂತ್ರ ಅಭ್ಯರ್ಥಿ ಕೆ ಎಚ್ ಪುಟ್ಟುಸ್ವಾಮಿ 1,267 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರು. ಸುಳ್ಯದ ಬಿಜೆಪಿಯ ಭಾಗೀರಥಿ ಮುರುಳ್ಯ ಅವರು ಅತಿ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಯಾಗಿದ್ದು, 28 ಲಕ್ಷ ರೂಪಾಯಿ ಆಸ್ತಿ ಘೋಷಿಸಿದ್ದಾರೆ. ಮತ್ತೊಬ್ಬ ಬಿಜೆಪಿ ಶಾಸಕ ಎಸ್ ಶ್ರೀವತ್ಸ ಅವರು ಶ್ರೀಮಂತ ವಿಜೇತ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿದ್ದು, 48 ಲಕ್ಷ ರೂಪಾಯಿ ಆಸ್ತಿ ಘೋಷಿಸಿದ್ದಾರೆ.
ಒಟ್ಟು 93 ಶಾಸಕರು ಮತ್ತೆ ಮರು ಆಯ್ಕೆಯಾಗಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನಿಂದ 51 , ಬಿಜೆಪಿಯಿಂದ 38 ಮತ್ತು ಜೆಡಿಎಸ್‌ನಿಂದ ನಾಲ್ವರು ಮರು ಆಯ್ಕೆಯಾಗಿದ್ದಾರೆ. ಅವರ ಸರಾಸರಿ ಸಂಪತ್ತು 2018 ರಲ್ಲಿ ರೂ 42.48 ಕೋಟಿಯಿಂದ ರೂ 29.03 ಕೋಟಿಯಿಂದ ರೂ 71.52 ಕೋಟಿಗೆ ಏರಿಕೆಯಾಗಿದೆ. ಮರು ಆಯ್ಕೆಯಾದ ಶಾಸಕರ ಆಸ್ತಿ ಸರಾಸರಿ ಶೇಕಡ 68 ರಷ್ಟು ಏರಿಕೆ ಕಂಡಿದೆ.
ಕ್ರಿಮಿನಲ್ ಪ್ರಕರಣಗಳು
ವಿಜೇತ ಅಭ್ಯರ್ಥಿಗಳಲ್ಲಿ ಮೂರನೇ ಒಂದು ಭಾಗದಷ್ಟು, ಅಂದರೆ 71 ಮಂದಿ ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಕಾಂಗ್ರೆಸ್‌ನ 134 ರಲ್ಲಿ 40 (ಶೇ. 30) ಮಂದಿ ಗಂಭೀರ ಕ್ರಿಮಿನಲ್ ಅಪರಾಧಗಳನ್ನು ಘೋಷಿಸಿದ್ದಾರೆ. ಬಿಜೆಪಿಗೆ ಸಂಬಂಧಿಸಿದಂತೆ, 66 (ಶೇ. 35) ವಿಜೇತರಲ್ಲಿ 23 ಮಂದಿ ಇಂತಹ ಪ್ರಕರಣಗಳನ್ನು ಹೊಂದಿದ್ದಾರೆ.
19 (ಶೇ. 37) ಮಂದಿ ಜೆಡಿಎಸ್ ವಿಜೇತರಲ್ಲಿ ಏಳು ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. 51 ಇತರ ವಿಜೇತ ಅಭ್ಯರ್ಥಿಗಳು ಗಂಭೀರ ಸ್ವರೂಪದಲ್ಲಿಲ್ಲದ ಪ್ರಕರಣಗಳನ್ನು ಹೊಂದಿದ್ದಾರೆ. ಒಟ್ಟು 122 (ಶೇ. 50) ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ.
ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್‌ನ ದರ್ಶನ್ ಧ್ರುವನಾರಾಯಣ್ (28) ಶಾಸಕರಾಗಿ ಗೆದ್ದಿರುವ ಅತ್ಯಂತ ಕಿರಿಯ ಅಭ್ಯರ್ಥಿ. ಈ ವರ್ಷದ ಮಾರ್ಚ್‌ನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ನಿಧನರಾದ ಕರ್ನಾಟಕ ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ್, ಒಂದು ತಿಂಗಳ ನಂತರ ತಾಯಿ ವೀಣಾರನ್ನು ಕಳೆದುಕೊಂಡರು. ಆರನೇ ಬಾರಿಗೆ ಗೆದ್ದಿರುವ ಕಾಂಗ್ರೆಸ್‌ನ 92 ವರ್ಷದ ಶಾಮನೂರು ಶಿವಶಂಕರಪ್ಪ ಗೆದ್ದಿರುವ ಅತ್ಯಂತ ಹಿರಿಯ ಅಭ್ಯರ್ಥಿ.












Click it and Unblock the Notifications