KPS Schools: ರಾಜ್ಯದಲ್ಲಿ 900 ಕೆಪಿಎಸ್ ಶಾಲೆಗಳು.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಇಲ್ಲಿದೆ ಮಾಹಿತಿ
ಬೆಂಗಳೂರು, ನವೆಂಬರ್ 4: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತರಲಾಗುತ್ತಿದೆ. ಹಾಗೆಯೇ ಇದೀಗ ಇಲ್ಲಿನ 900 ಕನ್ನಡ ಮತ್ತು ಉರ್ದು ಮಾಧ್ಯಮ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆಪಿಎಸ್) ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.
ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುವ ಕಾನೂನು ತರಲು ಅವರು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದರು. 70ನೇ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಮಾತನಾಡಿದ ಅವರು, ಸ್ಥಳೀಯ ಭಾಷೆಗಳನ್ನು ನಿರ್ಲಕ್ಷಿಸುವುದರಿಂದ ಮಕ್ಕಳ ಕಲಿಕೆ ಮತ್ತು ಆಲೋಚನಾ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ ಎಂದು ಹೇಳಿದರು.

ಮದರಸಾಗಳಲ್ಲಿ ಕನ್ನಡ ಬೋಧನೆಗೂ ಸರ್ಕಾರ ಆದ್ಯತೆ ನೀಡಲಿದೆ. ಕನ್ನಡವನ್ನು ಆಧುನಿಕ ತಂತ್ರಜ್ಞಾನದ ಭಾಷೆಯನ್ನಾಗಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಪ್ರಯತ್ನದಲ್ಲಿ ವಿದ್ವಾಂಸರು ಮತ್ತು ತಜ್ಞರು ನಮಗೆ ಸಹಾಯ ಮಾಡಬೇಕು ಎಂದು ನಾನು ಕೋರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಸಿದ್ದರಾಮಯ್ಯ ಆಕ್ರೋಶ: ಸದ್ಯ ಇದೀಗ ಎಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದೆ. ಇದೇ ಕಾರಣ ಇಟ್ಟುಕೊಂಡು ಹಲವಾರು ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದ ಘಟನೆಗಳು ನಡೆದಿದೆ. ಆದ್ದರಿಂದ ಇದೀಗ ಕನ್ನಡ ನೆಲದಲ್ಲಿ ಎಐನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಕೊಂಡೊಯ್ಯಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಬೇಕೆಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಇಂಗ್ಲಿಷ್, ಹಿಂದಿ ಭಾಷೆಗಳು ಮಕ್ಕಳ ಪ್ರತಿಭೆಗೆ ಅಡ್ಡಿ ಆಗುತ್ತಿವೆ. ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಲು ಸೂಕ್ತ ಕಾನೂನು ತರಬೇಕಿದೆ. ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅನಿವಾರ್ಯತೆ ಇದೆ. ಆದ್ದರಿಂದ ಹೊಸ ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಕುರಿತು ನೂತನ ನೀತಿಯನ್ನು ಜಾರಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣದಲ್ಲಿ ಕನ್ನಡ ನಿರ್ಲಕ್ಷ್ಯ ಹಲವು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಇತರ ಭಾಷೆಗಳಿಗೆ ಇಲ್ಲದ ಬಿಕ್ಕಟ್ಟು ಕನ್ನಡಕ್ಕೆ ಎದುರಾಗಿದೆ. ಬೇರೆ ದೇಶಗಳ ಮಕ್ಕಳು ತಾಯಿ ನುಡಿಯಲ್ಲೇ ಯೋಚಿಸುತ್ತಾರೆ, ಕಲಿಯುತ್ತಾರೆ, ಕನಸು ಕಾಣುತ್ತಾರೆ. ಆದರೆ, ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ಹೊರಹಾಕಿದರು.
ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತರಲು ಸೂಕ್ತ ಕಾನೂನು ತರಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ. ಅದರೂ ಸಹ ಅನುದಾನ ನೀಡದೇ ಅನ್ಯಾಯ ಮಾಡುತ್ತಿದ್ದಾರೆ. ಕರ್ನಾಟಕ ವಿರೋಧಿಯಾದ ಎಲ್ಲವನ್ನೂ ನಾವು ವಿರೋಧಿಸಲೇಬೇಕಾಗಿದೆ ಎಂದು ಘರ್ಜಿಸಿದರು.
ಈಗಾಗಲೇ ಕರ್ನಾಟಕದಲ್ಲಿ ಬೇರೆ ಭಾಷೆಯವರ ದಬ್ಬಾಳಿಕೆ ಹೆಚ್ಚಾಗಿದ್ದು, ಅವರ ಕೊಬ್ಬು ಇಳಿಸುವ ಕೆಲಸಗಳು ಸಹ ನಡೆಯುತ್ತಿವೆ. ಹೊರ ರಾಜ್ಯಗಳಿಂದ ಬಂದು ಇಲ್ಲಿನ ಅನ್ನ, ನೀರು ಸೇವನೆ ಮಾಡಿ ಇಲ್ಲಿಯ ನೆಲದ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಲಿರುತ್ತವೆ. ಇಂತಹವರ ವಿರುದ್ಧ ಸೂಕ್ತ ತೆಗೆದುಕೊಳ್ಳಬೇಕು ಎನ್ನುವ ಕೂಗುಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಮತ್ತೊಂದೆಡೆ, ಹಿಂದಿ ಹೇರಿಕೆಯಂತಹ ಘಟನೆಗಳು ಕೂಡ ನಡೆದಿವೆ. ಇದಕ್ಕೆ ತಕ್ಕ ತಿರುಗೇಟು ಕೊಡುವ ಕೆಲಸಗಳು ಕೂಡ ಆಗುತ್ತಿವೆ. ಇದರ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಕಾನೂನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.












Click it and Unblock the Notifications