7th Pay Commission; ಸರ್ಕಾರಿ ನೌಕರರಿಗೆ ಹೊಸ ಭರಸೆ ಕೊಟ್ಟ ಡಿಸಿಎಂ ಡಿಕೆಶಿ
ಬೆಂಗಳೂರು, ಜೂನ್ 17: ಕರ್ನಾಟಕದ ಸರ್ಕಾರಿ ನೌಕರರು, ನಿವೃತ್ತ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸರ್ಕಾರ ಯಾವಾಗ ಜಾರಿಗೊಳಿಸುತ್ತದೆ? ಎಂದು ಕಾಯುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ನೌಕರರಿಗೆ ಹಲವು ಭರವಸೆಗಳನ್ನು ನೀಡುತ್ತಲೇ ಇದೆ.
ಲೋಕಸಭೆ ಚುನಾವಣೆ 2024, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡಿದೆ. ನೀತಿ ಸಂಹಿತೆ ತೆರವಾದ ಬಳಿಕ ಕರ್ನಾಟಕ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯನ್ನು ಸಹ ನಡೆಸಲಾಗಿದೆ. ಆದರೆ ಸರ್ಕಾರಿ ನೌಕರರಿಗೆ ಸಹಿಸುದ್ದಿ ಸಿಕ್ಕಿಲ್ಲ.

ಈಗ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸರ್ಕಾರಿ ನೌಕರರಿಗೆ ಮತ್ತೊಂದು ಭರವಸೆ ನೀಡಿದ್ದಾರೆ. ಜೂನ್ 15ರಂದು ಅವರು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಬೆಂಗಳೂರು ನಗರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಡಿ. ಕೆ. ಶಿವಕುಮಾರ್ ಭರವಸೆ ಏನು?; ಡಿ. ಕೆ. ಶಿವಕುಮಾರ್ ಮಾತನಾಡಿ, "ಸರ್ಕಾರಿ ನೌಕರರ ಸಮಸ್ಯೆಗಳ ಅರಿವು ಇದೆ. ಮಂತ್ರಿಗಳು ಸರ್ಕಾರದ ಸೇವಕರೇ. ಸಮಸ್ಯೆಎಗ ಪರಿಹಾರ ಕಂಡುಕೊಳ್ಳಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ" ಎಂದು ಹೇಳಿದರು.
"7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಬದ್ಧವಾಗಿದೆ. ನೌಕರರ ಎಲ್ಲಾ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುತ್ತದೆ. ಲೋಕಸಭೆ ಚುನಾವಣೆ ಸರ್ಕಾರಿ ನೌಕರರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವುದಕ್ಕೆ ಸಾಕ್ಷಿಯಾಗಿದೆ" ಎಂದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿತ್ತು. 2023ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ರಚನೆಗೊಂಡಿತು. 2024ರ ಮಾರ್ಚ್ 16ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿಯನ್ನು ನೀಡಿದೆ.
ಆದರೆ ವರದಿ ನೀಡಿದ ದಿನದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರದಿ ಬಗ್ಗೆ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಈಗ ನೀತಿ ಸಂಹಿತೆ ತೆರವು ಮಾಡಲಾಗಿದ್ದು, ಆಯೋಗದ ವರದಿ ಯಾವಾಗ ಜಾರಿಯಾಗಲಿದೆ? ಎಂದು ನೌಕರರು ಕಾಯುತ್ತಿದ್ದಾರೆ.
ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳು ಜೂನ್ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ಮನವಿ ಸಲ್ಲಿಕೆ ಮಾಡಿದ್ದರು.
ಜೂನ್ 6ರಂದು ಲೋಕಸಭೆ ಚುನಾವಣೆ ನೀತಿ ಸಂಹಿತೆ, ಜೂನ್ 12ರಂದು ವಿಧಾನ ಪರಿಷತ್ ಮಾದರಿ ಚುನಾವಣಾ ನೀತಿ ಸಂಹಿತೆ ತೆರವು ಮಾಡಲಾಗಿದೆ. ಜೂನ್ 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆಯೂ ನಡೆದಿತ್ತು. ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಕುರಿತು ಚರ್ಚೆ ನಡೆದಿತ್ತು. ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಸಂಗ್ರಹ ಮಾಡಿದ್ದರು.
ಮಾರ್ಚ್‌ನಲ್ಲಿ 7ನೇ ವೇತನ ಆಯೋಗದ ವರದಿ ಸ್ವೀಕರಿಸಿದ್ದ ಮುಖ್ಯಮಂತ್ರಿಗಳು ಟ್ವೀಟ್ ಮಾಡಿ, "ರಾಜ್ಯದ 7ನೇ ವೇತನ ಆಯೋಗವು ಇಂದು ವರದಿಯನ್ನು ಸಲ್ಲಿಸಿದ್ದು ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ" ಎಂದು ಭರವಸೆ ನೀಡಿದ್ದರು.
"ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ. ನಿನ್ನೆ ನಾನು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಇಂದು ವರದಿಯನ್ನು ಸ್ವೀಕರಿಸಲಾಗಿದೆ. ವರದಿಯಲ್ಲಿ ಕನಿಷ್ಠ ಮೂಲವೇತನವನ್ನು ರೂ.17,000 ದಿಂದ ರೂ.27,000 ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಇನ್ನೂ ಅನೇಕ ಶಿಫಾರಸುಗಳಿದ್ದು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ" ಎಂದು ಹೇಳಿದ್ದರು.












Click it and Unblock the Notifications