7th pay commission: ವಿಶೇಷ ಚೇತನ ನೌಕರರಿಗಾಗಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳು ಹೀಗಿವೆ
ಬೆಂಗಳೂರು, ಏಪ್ರಿಲ್. 11: ಸರ್ಕಾರಿ ನೌಕರರು ಬಹು ನಿರೀಕ್ಷೆಯಿಂದ ಕಾಯುತ್ತಿರುವ 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ.17,000 ರಿಂದ ರೂ.27,000 ಕ್ಕೆ ಪರಿಷ್ಕರಿಸಲು ಶಿಫಾರಸ್ಸು ಮಾಡಿದೆ. ಇದರ ಜೊತೆಗೆ ವಿಶೇಷ ಚೇತನ ನೌಕರರಿಗಾಗಿ ಹಲವು ಶಿಫಾರಸ್ಸುಗಳನ್ನು ಮಾಡಿದೆ.
ವಿಶೇಷ ಚೇತನ ನೌಕರರಿಗಾಗಿ ಆಯೋಗವು ವಿಶೇಷವಾಗಿ ಹಲವು ಶಿಫಾರಸ್ಸುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಸಲ್ಲಿಸಲಾಗಿರುವ ವೇತನ ಆಯೋಗದ ವರದಿಯಲ್ಲಿದೆ. ಈ ವರದಿಯನ್ನು ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಗೆ ತರಲಾಗುತ್ತದೆ ಎನ್ನಲಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಒಂದು ದಿನದ ಮೊದಲು ವರದಿ ಸಲ್ಲಿಸಲಾಗಿದೆ. ಹೀಗಾಗಿ ಸರ್ಕಾರಿ ನೌಕರರ ಕನಸು ಕೊಂಚ ಮುಂದೆ ಹೋಗಿದೆ.

ವಿಶೇಷ ಚೇತನ ನೌಕರರಿಗಾಗಿ ಆಯೋಗದ ಶಿಫಾರಸ್ಸು
* ವಾಹನ ಭತ್ಯೆಯನ್ನು ಕೇವಲ ಅಂಧ ಮತ್ತು ಚಲನವಲನ ವೈಕಲ್ಯತೆಯುಳ್ಳ ವಿಶೇಷ ಚೇತನ ನೌಕರರಿಗೆ ಸೀಮಿತಗೊಳಿಸುವ ಬದಲಾಗಿ ಎಲ್ಲಾ ವಿಶೇಷ ಚೇತನ ನೌಕರರಿಗೆ ಈ ಸೌಲಭ್ಯವನ್ನು ವಿಸ್ತರಿಸಬೇಕು.
* ಸರ್ಕಾರಿ ನೌಕರರ ವಿಕಲಚೇತನ ಮಕ್ಕಳ ಶಿಕ್ಷಣ ಭತ್ಯೆಯನ್ನು ಪ್ರತಿ ಮಗುವಿಗೆ ತಿಂಗಳಿಗೆ ರೂ.1,000 ರಿಂದ ರೂ.2,000 ಕ್ಕೆ ಹೆಚ್ಚಿಸಬೇಕು.
* ಬಡ್ಡಿ ರಹಿತ ರೂ.50,000 ಮುಂಗಡ ಅಥವಾ ಸಲಕರಣೆಗಳ ಬೆಲೆ ಯಾವುದು ಕಡಿಮೆಯೋ ಅದನ್ನು 10 ಮಾಸಿಕ ಕಂತುಗಳಲ್ಲಿ ಮರುಪಡೆಯಬಹುದಾದ ಲ್ಯಾಪ್‌ಟಾಪ್‌ಗಳು, ಡಿಜಿಟಲ್ ಒತ್ತಾಸೆಗಳು, Al ಚಾಲಿತ ಸ್ಮಾರ್ಟ್ ಗ್ಲಾಸ್‌ಗಳು ಮತ್ತು ಇತರ ಸಾಧನಗಳನ್ನು ಖರೀದಿಸಲು ಒದಗಿಸಲಾಗುತ್ತದೆ.
* ವಿಶೇಷ ಚೇತನ ಉದ್ಯೋಗಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಯಾವುದೇ ವಾಹನದ ಖರೀದಿಗೆ ಅಸ್ತಿತ್ವದಲ್ಲಿರುವ ಶೇ.30 ರಿಂದ ಶೇ.40ಕ್ಕೆ ವಾಹನ ದರದ ಗರಿಷ್ಠ ರೂ.60,000 ಕ್ಕೆ ಒಳಪಟ್ಟು ಸಬ್ಸಿಡಿಯನ್ನು ಹೆಚ್ಚಿಸಬೇಕು.

ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಬೆಂಬಲ ಮತ್ತು ಉತ್ತೇಜನಕ್ಕೆ ಶಿಫಾರಸ್ಸು
* ಬೈಸಿಕಲ್ ಮುಂಗಡವನ್ನು ಗರಿಷ್ಠ ರೂ.10,000 ಕ್ಕೆ ಹೆಚ್ಚಿಸಬೇಕು.
* ವಿದ್ಯುತ್ ಚಾಲಿತ ಬೈಸಿಕಲ್‌ಗಳಿಗೆ ಮುಂಗಡವನ್ನು ಗರಿಷ್ಠ ರೂ.30,000 ಕ್ಕೆ ಹೆಚ್ಚಿಸಬೇಕು.
* ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಮುಂಗಡವನ್ನು ಗರಿಷ್ಠ ರೂ.1.25 ಲಕ್ಷಕ್ಕೆ ಏರಿಸಬೇಕು.
* ವಿದ್ಯುತ್ ಚಾಲಿತ ನಾಲ್ಕು ಚಕ್ರದ ವಾಹನಗಳಿಗೆ ಮುಂಗಡವನ್ನು ಗರಿಷ್ಠ ರೂ.10 ಲಕ್ಷಕ್ಕೆ ಹೆಚ್ಚಿಸುವುದು.
* ಗಣಕಯಂತ್ರ ಮುಂಗಡವನ್ನು ಗರಿಷ್ಠ ರೂ.60,000 ಕ್ಕೆ ಪರಿಷ್ಕರಿಸಬೇಕು.
* ಸೋಲಾರ್ ವಾಟರ್ ಹೀಟರ್, ಸೋಲಾರ್ ಕುಕ್ಕರ್, ಮೊಪೆಡ್ ಮತ್ತು ಮೋಟಾರು ವಾಹನಗಳ ದುರಸ್ಥಿ ಮತ್ತು ಉಪಕರಣಗಳಿಗೆ ಮುಂಗಡಗಳನ್ನು ಸ್ಥಗಿತಗೊಳಿಸಬೇಕು.












Click it and Unblock the Notifications