7th Pay Commission; NPS ಬಗ್ಗೆ ಆಯೋಗ ಮಾಡಿದ ಶಿಫಾರಸುಗಳು
ಬೆಂಗಳೂರು, ಮಾರ್ಚ್ 18: ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ಸಲ್ಲಿಕೆ ಮಾಡಿದೆ. ಆಯೋಗವು ಮೂಲವೇತನದ ಶೇ27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
ಮಾರ್ಚ್ 19ರ ಶನಿವಾರ ಕರ್ನಾಟಕ ಸರ್ಕಾರಕ್ಕೆ ಆಯೋಗದ ವರದಿ ಸಲ್ಲಿಕೆ ಮಾಡಿದೆ. ಆದರೆ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸದ್ಯಕ್ಕೆ ವರದಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. 7ನೇ ರಾಜ್ಯ ವೇತನ ಆಯೋಗದ ವರದಿಯಲ್ಲಿ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ ಎನ್‌ಪಿಎಸ್ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ.

ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಸ್ಥಾಪನೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡಿಸಿದಾಗಲೂ ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಮರು ಜಾರಿ ಕುರಿತು ಯಾವುದೇ ಭರವಸೆ ನೀಡಿರಲಿಲ್ಲ. ಆದ್ದರಿಂದ 7ನೇ ವೇತನ ಆಯೋಗದ ವರದಿಯಲ್ಲಿ ಈ ಕುರಿತು ಯಾವ ಶಿಫಾರಸು ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರು ಕಾದಿದ್ದರು.
ಆಯೋಗದ ಶಿಫಾರಸು ಏನು?: 7ನೇ ವೇತನ ಆಯೋಗದ ವರದಿಯಲ್ಲಿ ಸರ್ಕಾರಿ ನೌಕರರಿಗೆ ಓಪಿಎಸ್ ಮರುಜಾರಿಗೊಳಿಸುವ ವಿಷಯವನ್ನು ಅಧ್ಯಯನ ಮಾಡುವುದಕ್ಕೆ ಕರ್ನಾಟಕವು ಪ್ರತ್ಯೇಕ ಸಮಿತಿಯೊಂದನ್ನು ರಚಿಸಿದೆ. ಇದನ್ನು ಗಮನಿಸಿರುವ ಆಯೋಗವು ಈ ವಿಷಯದ ಮೇಲೆ ಯಾವುದೇ ಶಿಫಾರಸ್ಸುಗಳನ್ನು ಮಾಡುವುದು ಸೂಕ್ತವಲ್ಲ ಎಂದು ಭಾವಿಸುತ್ತದೆ ಎಂದು ಹೇಳಿದೆ.
ಆದ್ದರಿಂದ ರಾಜ್ಯ ಸರ್ಕಾರವು ಈ ವಿಷಯವನ್ನು ಪರಿಶೀಲಿಸುವ ಮತ್ತು ಸಾಧ್ಯವಾದಷ್ಟು ಬೇಗ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ ಎಂಬ ಅಭಿಪ್ರಾಯದೊಂದಿಗೆ ಎನ್‌ಪಿಎಸ್‌ಗೆ ಸಂಬಂಧಿಸಿದ ಎಲ್ಲಾ ಮನವಿಗಳನ್ನು ರಾಜ್ಯ ಹಣಕಾಸು ಇಲಾಖೆಗೆ ಕಳುಹಿಸಿದೆ ಎಂದು ಆಯೋಗದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ವರದಿಯಲ್ಲಿ, "ನಿವೃತ್ತಿ ವೇತನ ಸೌಲಭ್ಯಗಳ ಕುರಿತಾದ ಈ ಅಧ್ಯಾಯದಲ್ಲಿ ನಾವು ನಮ್ಮ ಚರ್ಚೆಯನ್ನು ಓಪಿಎಸ್ ಅಥವಾ ಹಳೆಯ ನಿವೃತ್ತಿ ವೇತನ ಯೋಜನೆಗೆ ಸೀಮಿತಗೊಳಿಸಿದ್ದೇವೆ. ಈ ಹಿಂದೆ ವಿವರಿಸಿದಂತೆ, ಡಿಸೆಂಬರ್ 2003ರಲ್ಲಿ ಸರ್ಕಾರಿ ನೌಕರರಿಗಾಗಿ ಓಪಿಎಸ್ ಬದಲಾಗಿ ಎನ್‌ಪಿಎಸ್ ಎಂದು ಉಲ್ಲೇಖಿಸಲಾದ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಯಿತು. ಕರ್ನಾಟಕ ಸರ್ಕಾರವು ಎನ್‌ಪಿಎಸ್‌ಅನ್ನು ದಿನಾಂಕ 01/04/2006ರಂದು ಜಾರಿಗೊಳಿಸಿತು ಮತ್ತು ಅಂದಿನಿಂದ ರಾಜ್ಯ ಸರ್ಕಾರದಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಎಲ್ಲಾ ನೌಕರರು ಕಡ್ಡಾಯವಾಗಿ ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುತ್ತಾರೆ" ಎಂದು ಹೇಳಿದೆ.
ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಎನ್‌ಪಿಎಸ್ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರವನ್ನು ನೀಡಿದ್ದರು. ಉತ್ತರದಲ್ಲಿ, "ರಾಜ್ಯದಲ್ಲಿ 5,09,384 ಸರ್ಕಾರಿ ನೌಕರರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹಳೆ ಪಿಂಚಣಿ ಯೋಜನೆಗೆ 2,41,260 ನೌಕರರು ಒಳಪಟ್ಟಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ 2,68,124 ನೌಕರರು ಒಳಪಟಿದ್ದಾರೆ" ಎಂದು ವಿವರ ನೀಡಿದ್ದರು.
"ರಾಜ್ಯದಲ್ಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸುವ ಸಂಬಂಧ ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಯೋಜನೆಯನ್ನು ಅನುಷ್ಠಾನ ಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಕೆ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆದೇಶಿಸಲಾಗಿದೆ" ಎಂದು ಸಿದ್ದರಾಮಯ್ಯ ಹೇಳಿದ್ದರು.












Click it and Unblock the Notifications