7th Pay Commission; ವರದಿ ಅನುಷ್ಠಾನ, ಸರ್ಕಾರಕ್ಕೆ ಹೊರೆ ಎಷ್ಟು?
ಬೆಂಗಳೂರು, ಫೆಬ್ರವರಿ.19: ಕರ್ನಾಟಕದ ಮುಖ್ಯಮಂತ್ರಿ, ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾದ ಭರವಸೆ ನೀಡಿಲ್ಲ. ಇದು ನೌಕರರ ಅಸಮಾಧಾನಕ್ಕೂ ಕಾರಣವಾಗಿದೆ.
2024-25ನೇ ಸಾಲಿನ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ವರದಿ ಅನುಷ್ಠಾನದ ಕುರಿತು ಹಾಗೂ ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಎರಡು ಪ್ರಮುಖ ನಿರ್ಧಾರದಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ.

ಈಗಾಗಲೇ 7ನೇ ವೇತನ ಆಯೋಗದ ವರದಿ ಅನುಷ್ಠಾನ ವಿಳಂಬವಾಗಿರುವ ಕಾರಣ ಶೀಘ್ರದಲ್ಲೇ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 3,71,383 ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸಿದರು. ಬಜೆಟ್ ಭಾಷಣದಲ್ಲಿ 7ನೇ ರಾಜ್ಯ ವೇತನ ಆಯೋಗದ ಕುರಿತು ಉಲ್ಲೇಖಿಸಿದರು. ಆದರೆ ಹಳೆ ಪಿಂಚಣಿ ವ್ಯವಸ್ಥೆ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಲಿಲ್ಲ.

ಸರ್ಕಾರ ಕೆ. ಸುಧಾಕರ್ ನೇತೃತ್ವದಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಭಾಷಣದಲ್ಲಿ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು. ಆದರೆ ಬಜೆಟ್ ಭಾಷಣದಲ್ಲಿ ಸರ್ಕಾರಿ ನೌಕರರ ಬೇಡಿಕೆಯಂತೆ ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ.
ಕರ್ನಾಟಕ ಸರ್ಕಾರ 2023ರ ನವೆಂಬರ್‌ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಈಗ ಆಯೋಗ ವರದಿ ನೀಡುವ ಮಾರ್ಚ್ 15ರ ಹೊತ್ತಿಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಇದೆ ಜೊತೆಗೆ ವೇತನ ಆಯೋಗದ ಶಿಫಾರಸು ಜಾರಿಗೆ ಬಂದರೆ ಬೊಕ್ಕಸಕ್ಕೆ ಹೊರೆಯಾಗಲಿದೆ.
ಹೊರೆಯಾಗಲಿದೆ ವೇತನ ಆಯೋಗ!?
ಇನ್ನು, ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ಬಂದರೆ ಸರ್ಕಾರದ ಬೊಕ್ಕಸಕ್ಕೆ 15 ರಿಂದ 20 ಸಾವಿರ ಕೋಟಿ ರೂಪಾಯಿಯ ಹೊರೆ ಬೀಳುತ್ತದೆ. ಎನ್‌ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದು 4.5% ಹೆಚ್ಚಿನ ಹೊರೆ ಎಂಬ ಆರ್‌ಬಿಐ ಪ್ರಸ್ತಾಪವೂ ಇದೆ. ಹೀಗಾಗಿಯೇ ನೌಕರರನ್ನು ಹೇಗೆ ಸಂಭಾಳಿಸಲಿದೆ ಸರ್ಕಾರ ಎನ್ನುವ ಪ್ರಶ್ನೆಯು ಕಾಡುತ್ತಿದೆ.
6ನೇ ವೇತನ ಆಯೋಗ ರಚಿಸಿದ್ದ ಸಿದ್ದರಾಮಯ್ಯ
2013 -18 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜೂನ್ 1, 2017 ರಂದು 6ನೇ ವೇತನ ಆಯೋಗ ರಚಿಸಿದ್ದರು. ವೇತನ ಪರಿಷ್ಕರಣೆ ಕುರಿತು ಆಯೋಗ ಮಾರ್ಚ್ 31, 2018ರಲ್ಲಿ ಅಂದರೆ, 8 ತಿಂಗಳಿಗೆ ವರದಿ ಸಲ್ಲಿಸಿತ್ತು. ಅದೇ ವರ್ಷದ ಮಾರ್ಚ್‌ನಲ್ಲಿ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಾಗಿತ್ತು. ಆದರೆ, ಇದರಿಂದ 10,500 ಕೋಟಿ ಹೆಚ್ಚುವರಿ ಹೊರೆಯಾಗಿತ್ತು ಎಂದು ವರದಿಯಾಗಿದೆ.











Click it and Unblock the Notifications