7th Pay Commission: ಸರ್ಕಾರಿ ನೌಕರರ ಪ್ರಯಾಣ ಭತ್ಯೆ, ವಾಹನ ಭತ್ಯೆ ಶಿಫಾರಸುಗಳು
ಬೆಂಗಳೂರು, ಆಗಸ್ಟ್ 28: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ನೀಡಿರುವ 558 ಪುಟಗಳ ಸಂಪುಟ-1ರ ವರದಿಯನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ವರದಿ ಜಾರಿಗೆ ಅನುಮೋದನೆ ಸಿಕ್ಕಿದ್ದು, ಆಗಸ್ಟ್ ತಿಂಗಳಿನಿಂದಲೇ ಸರ್ಕಾರಿ ನೌಕರರ ವೇತನ, ಭತ್ಯೆಗಳು ಹೆಚ್ಚಳವಾಗಲಿದೆ. ವಿವಿಧ ಭತ್ಯೆಗಳ ವಿಚಾರದಲ್ಲಿ ಆಯೋಗ ತನ್ನ ವರದಿಯಲ್ಲಿ ವಿವರಣೆಯನ್ನು ನೀಡಿದೆ. ಭತ್ಯೆ ಹೆಚ್ಚಳ ಎಷ್ಟು, ಏಕೆ? ಎಂದು ಕೋಷ್ಠಕದ ಮೂಲಕ ಮಾಹಿತಿ ನೀಡಿದೆ.
ರಾಜ್ಯ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಸರ್ಕಾರಿ ನೌಕರರ ನಿಗದಿತ ಪ್ರಯಾಣ ಭತ್ಯೆ, ವಾಹನ ಭತ್ಯೆ ಕುರಿತು ಶಿಫಾರಸುಗಳನ್ನು ಮಾಡಿದೆ. ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ನಿಯಮಿತವಾಗಿ ಪ್ರಯಾಣ ಮಾಡುವ ಮತ್ತು ಯಾವುದೇ ಅಧಿಕೃತ ವಾಹನ ಸೌಲಭ್ಯ ದೊರೆಯದಿರುವ ಸರ್ಕಾರಿ ನೌಕರರು ನಿಗದಿತ ಪ್ರಯಾಣ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.

ನಿಗದಿತ ಪ್ರಯಾಣ ಭತ್ಯೆಯ ದರಗಳನ್ನು ಹೆಚ್ಚಿಸುವುದಕ್ಕಾಗಿ ಹಲವು ಇಲಾಖೆಯ ನೌಕರರು ಮತ್ತು ನೌಕರರ ಸಂಘಗಳಿಂದ ಆಯೋಗಕ್ಕೆ ಮನವಿಗಳನ್ನು ಸಲ್ಲಿಸಿದ್ದಾರೆ. ಸಾರಿಗೆ ವೆಚ್ಚದಲ್ಲಿನ ಸಾಮಾನ್ಯ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮನವಿಗಳನ್ನು ಪರಿಶೀಲಿಸಲಾಗಿದ್ದು, ಪ್ರಸ್ತುತ ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವ ನೌಕರರಿಗೆ ಸಂಬಂಧಿಸಿದಂತೆ ನಿಗದಿತ ಪ್ರಯಾಣ ಭತ್ಯೆಯನ್ನು ಈ ಕೆಳಗಿನಿಂತೆ ಶಿಫಾರಸು ಮಾಡಲಾಗಿದೆ.
ಭತ್ಯೆ ಹೆಚ್ಚಳ ಮಾಹಿತಿ: ನಿಗದಿತ ಪ್ರಯಾಣ ಭತ್ಯೆಯ ದರಗಳು ಇಲಾಖೆಗಳು, ಚಾಲ್ತಿಯಲ್ಲಿರುವ ದರ, ಶಿಫಾರಸು ಮಾಡಲಾದ ದರ (ಮಾಸಿಕ ರೂ.ಗಳು) ಮಾದರಿಯಲ್ಲಿವೆ.
* ಕಂದಾಯ ಇಲಾಖೆ. ತಾಲೂಕು ಪ್ರಭಾರದಲ್ಲಿರುವ ತಹಶೀಲ್ದಾರ್ (ಸರ್ಕಾರಿ ವಾಹನವನ್ನು ಹೊಂದದವರು). ಚಾಲ್ತಿಯಲ್ಲಿರುವ ದರ 1000 ರೂ., ಶಿಫಾರಸು ಮಾಡಲಾದ ದರ 1,500 ರೂ.ಗಳು. ಕಂದಾಯ ನಿರೀಕ್ಷಕರು 750 ರೂ., 1,000 ರೂ.ಗಳು. ಗ್ರಾಮ ಆಡಳಿತ ಅಧಿಕಾರಿ (ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿ) 500 ರೂ., 750 ರೂ.ಗಳು.
* ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ. ಸಹಾಯಕ ನಿರ್ದೇಶಕರು ರೂ. 1,000, ರೂ. 1,500. ಮೇಲ್ವಿಚಾರಕರು 750 ರೂ., 1,000 ರೂ.ಗಳು. ಪ್ರಥಮ/ ದ್ವಿತೀಯ ದರ್ಜೆ ಭೂಮಾಪಕರು 600 ರೂ., 1,000 ರೂ.ಗಳು. ಬಾಂದ್ ಜವಾನ 400 ರೂ.ಗಳು, 700 ರೂ,ಗಳು.
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಮೇಲ್ವಿಚಾರಕರು. 750 ರೂ.ಗಳು, 1,000 ರೂ.ಗಳು.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಕಿರಿಯ ಆರೋಗ್ಯ ಸಹಾಯಕರು (ಪುರುಷ/ ಮಹಿಳೆ) 400 ರೂ.ಗಳು, 600 ರೂ.ಗಳು. ಹಿರಿಯ ಆರೋಗ್ಯ ಸಹಾಯಕರು (ಪುರುಷ/ ಮಹಿಳೆ) 400 ರೂ.ಗಳು, 600 ರೂ.ಗಳು.
* ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳು. ಹಿರಿಯ ಪಶು ವೈದ್ಯಕೀಯ ನಿರೀಕ್ಷಕರು. 600 ರೂ.ಗಳು, 800 ರೂ.ಗಳು. ಪಶು ವೈದ್ಯಕೀಯ ಪರೀಕ್ಷಕರು 400 ರೂ.ಗಳು. 600 ರೂ.ಗಳು.
* ಶಿಕ್ಷಣ ಇಲಾಖೆ. ಕ್ಷೇತ್ರ ಶಿಕ್ಷಣ ಅಧಿಕಾರಿ (ಸರ್ಕಾರಿ ವಾಹನವನ್ನು ಒದಗಿಸದಿದ್ದವರಿಗೆ) 1000 ರೂ., 1,200 ರೂ.ಗಳು.
* ಕೃಷಿ ಇಲಾಖೆ. ಸಹಾಯಕ ಕೃಷಿ ಅಧಿಕಾರಿ 750 ರೂ.ಗಳು, 1000 ರೂ.ಗಳು. ಕೃಷಿ ಸಹಾಯಕರು 400 ರೂ.ಗಳು, 750 ರೂ.ಗಳು.
* ಅಧೀನ ನ್ಯಾಯಾಲಯಗಳು. ಬೇಲಿಫ್‌ಗಳು ಮತ್ತು ಪ್ರೊಸೆಸ್ ಸರ್ವರ್‌ಗಳು. 500 ರೂ., 1,000 ರೂ.ಗಳ ಏರಿಕೆಗೆ ಶಿಫಾರಸು ಮಾಡಲಾಗಿದೆ.
ವಾಹನ ಭತ್ಯೆ: ಸರ್ಕಾರಿ ನೌಕರನ ಕೆಲಸದಲ್ಲಿ ಸಾಕಷ್ಟು ಪ್ರಯಾಣ ಒಳಗೊಂಡಿರುವಾಗ ಕೇಂದ್ರ ಸ್ಥಾನದಲ್ಲಿ ಮತ್ತು ಸಮೀಪದಲ್ಲಿರುವ ಸ್ಥಳಗಳಿಗೆ ಪ್ರಯಾಣ ಮಾಡಲು ತಮ್ಮ ಸ್ವಂತ ವಾಹನವನ್ನು ಬಳಸುವ ಸರ್ಕಾರಿ ನೌಕರರಿಗೆ ಆತ ಅಥವ ಆಕೆಗೆ ಪ್ರಯಾಣ ಭತ್ಯೆ ಅಥವ ನಿಗದಿತ ಪ್ರಯಾಣ ಭತ್ಯೆ ಅನ್ವಯವಾಗದ ಸಂದರ್ಭದಲ್ಲಿ ಸರ್ಕಾರದ ವಿಶೇಷ ಮಂಜೂರಾತಿಯೊಂದಿಗೆ ಮಾಸಿಕ ವಾಹನ ಭತ್ಯೆಯನ್ನು ನೀಡಲಾಗುತ್ತದೆ.
ಹೆಚ್ಚುತ್ತಿರುವ ಇಂಧನ ಮತ್ತು ವಾಹನ ನಿರ್ವಹಣಾ ದರಕ್ಕೆ ಅನುಗುಣವಾಗಿ ಈ ಭತ್ಯೆಯನ್ನು ಪರಿಷ್ಕರಣೆ ಮಾಡುವುದು ಅಗತ್ಯವಾಗಿರುತ್ತದೆ. ಅದರಂತೆ ಆಯೋಗ ವಾಹನ ಭತ್ಯೆಯನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಗ್ರೂಪ್ ಎ, ಬಿ, ಸಿ, ಡಿ. ಮೋಟಾರ್ ಕಾರ್/ ಮೋಟಾರ್ ಸೈಕಲ್/ ಸ್ಕೂಟರ್/ ಮೊಪೆಡ್/ ಬೈಸಿಕಲ್. ಚಾಲ್ತಿಯಲ್ಲಿರುವ ದರ 900/ 600/ 300 ರೂ.ಗಳು. ಶಿಫಾರಸು ಮಾಡಲಾದ ದರ 1,200 ರೂ.ಗಳು, 800 ರೂ. ಮತ್ತು 500 ರೂ.ಗಳು.












Click it and Unblock the Notifications