7th Pay Commission; ಪ್ರಸ್ತುತ, ಪರಿಷ್ಕೃತಗೊಳ್ಳುವ ಭತ್ಯೆ ವಿವರ
ಬೆಂಗಳೂರು, ಮೇ 27: ರಾಜ್ಯದ ಸರ್ಕಾರಿ ನೌಕರರು ಕಾಂಗ್ರೆಸ್ ಸರ್ಕಾರ ಯಾವಾಗ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುತ್ತದೆ ಎಂದು ಕಾದು ಕುಳಿತಿದ್ದಾರೆ. ಜೂನ್ 12ಕ್ಕೆ ಎಲ್ಲಾ ಚುನಾವಣೆಗಳ ನೀತಿ ಸಂಹಿತೆ ಮುಕ್ತಾಯವಾಗಲಿದ್ದು, ಸರ್ಕಾರದ ನಡೆ ಕುತೂಹಲ ಮೂಡಿಸಿದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಆಯೋಗದ ವರದಿ ಸ್ವೀಕಾರ ಮಾಡಿರುವ ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಜಾರಿ ಕುರಿತು ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಪಡೆದು, ಆರ್ಥಿಕ ಇಲಾಖೆಗೆ ನೀಡಿದ್ದಾರೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ವರದಿಯಲ್ಲಿ ಭತ್ಯೆಗಳ ಕುರಿತು ಶಿಫಾರಸು ಮಾಡಲಾಗಿದೆ, ಅವುಗಳಲ್ಲಿ ಪ್ರಸ್ತುತ ಇರುವ ಮತ್ತು ಶಿಫಾರಸು ಮಾಡಿರುವ ಭತ್ಯೆಗಳ ವಿವರ ಇಲ್ಲಿದೆ.
ವಿವಿಧ ಭತ್ಯೆಗಳು: ಕೆ. ಸುಧಾಕರ್ ರಾವ್ 7ನೇ ವೇತನ ಆಯೋಗದ ವರದಿಯಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಯ ಕ್ರಮಗಳನ್ನು ವಿವರಿಸಿದ್ದಾರೆ. ದಿನಾಂಕ 01/07/2022ರಲ್ಲಿದ್ದಂತೆ ಮೂಲ ವೇತನ, ಸದರಿ ದಿನಾಂಕಕ್ಕೆ ಇದ್ದ ಶೇ 31ರಷ್ಟು ತುಟ್ಟಿ ಭತ್ಯೆ, ದಿನಾಂಕ 01/07/2022ರಂದು ಇದ್ದಂತೆ ಮೂಲ ವೇತನಕ್ಕೆ ಶೇ.27.50ರಷ್ಟು ಫಿಟ್ಮೆಂಟ್ ಸೌಲಭ್ಯ, ಹೊಸ ಮೂಲ ವೇತನ 1, 2 & 3 ಅನ್ನು ಸೇರಿಸಿ ಒಟ್ಟು ಮೊತ್ತದ ಮುಂದಿನ ಹಂತಕ್ಕೆ ನಿಗದಿಗೊಳಿಸಕ್ಕದ್ದು ಎಂದು ಹೇಳಿದ್ದಾರೆ.
ತುಟ್ಟಿ ಭತ್ಯೆಯಲ್ಲಿ ಭಾರತ ಸರ್ಕಾರದಿಂದ ಮಂಜೂರಾಗುವ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರಾಗುವ ತುಟ್ಟಿ ಭತ್ಯೆಯು ಶೇ.0.722 ಆಗಿರುತ್ತದೆ ಎಂದು ವರದಿಯ ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.
ಮನೆ ಬಾಡಿಗೆ ಭತ್ಯೆಯು ಎ, ಬಿ, ಸಿ ವರ್ಗಕ್ಕೆ ಬೇರೆ ಬೇರೆಯಾಗಿರುತ್ತದೆ. ಪ್ರಸ್ತುತ ದರ ಮೂಲ ವೇತನಕ್ಕೆ 'ಎ' ವರ್ಗದಲ್ಲಿ 24 ಇದ್ದು, ಪರಿಷ್ಕೃತ ದರ ಮೂಲ ವೇತನಕ್ಕೆ 20 ಆಗಲಿದೆ. 'ಬಿ' ವರ್ಗದಲ್ಲಿ 16 ಇದ್ದು, ಪರಿಷ್ಕೃತ ದರ 15 ಆಗಲಿದೆ. 'ಸಿ' ವರ್ಗದಲ್ಲಿ 8 ಇದ್ದು, ಪರಿಷ್ಕತ ದರ 7.5 ಆಗಲಿದೆ. ಪರಿಷ್ಕೃತ ಮೂಲ ವೇತನದ ಮೇಲೆ ಪರಿಷ್ಕೃತ ಮನೆ ಬಾಡಿಗೆ ಭತ್ಯೆ ಮೊತ್ತ ಇರುತ್ತದೆ ಎಂದು ವರದಿ ಹೇಳಿದೆ.
ನಗರ ಪರಿಹಾರ ಭತ್ಯೆ ಎ, ಬಿ, ಸಿ, ಡಿ ಎಂದು ವರ್ಗವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ದರ ಎ & ಬಿ ವರ್ಗ 600, ಸಿ & ಡಿ ವರ್ಗಕ್ಕೆ 500 ರೂ. ಇದೆ. ಪರಿಷ್ಕೃತ ದರ ಎ & ಬಿ ವರ್ಗಕ್ಕೆ 900 ರೂ. ಮತ್ತು ಸಿ & ಡಿ ವರ್ಗಕ್ಕೆ 750 ರೂ. ಆಗಲಿದೆ.
ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು. ಪ್ರಸ್ತುತ ದರ ಎ & ಬಿ ವರ್ಗಕ್ಕೆ 450 ರೂ. ಮತ್ತು ಸಿ & ಡಿ ವರ್ಗಕ್ಕೆ 600 ರೂ. ಇದೆ. ಪರಿಷ್ಕತ ದರ ಎ & ಬಿ ವರ್ಗಕ್ಕೆ 700 ಮತ್ತು ಸಿ & ಡಿ ವರ್ಗಕ್ಕೆ 600 ರೂ. ಆಗಲಿವೆ. ಹೊರರಾಜ್ಯ ಭತ್ಯೆ ನವದೆಹಲಿ ಪ್ರಸ್ತುತ ಮೂಲ ವೇತನದ ಶೇ 35 ಇದ್ದು, ಪರಿಷ್ಕೃತ ದರವೂ ಅಷ್ಟೇ ಇರಲಿದೆ. ಹೊರರಾಜ್ಯ ಪ್ರಸ್ತುತ ಮೂಲ ವೇತನದ ಶೇ 10 ಇದ್ದು, ಅದು ಪರಿಷ್ಕೃತ ದರ ಶೇ 15 ಆಗಲಿದೆ.
ಪ್ರಭಾರ ಭತ್ಯೆ ಸರ್ಕಾರಿ ನೌಕರನ ಮೂಲ ವೇತನದ ಶೇ 15ರಷ್ಟು. ನಿಯೋಜನೆ/ ಅನ್ಯ ಸೇವೆ ಭತ್ಯೆ ಪ್ರತಿ ಮಾಹೆಯಾನ ಮೂಲ ವೇತನದ ಶೇ 5ರಷ್ಟು ಮತ್ತು ಗರಿಷ್ಠ ರೂ. 2000ಗಳ ಹೆಚ್ಚಳದೊಂದಿಗೆ ಎಂದು ಇದೆ. ವೈದ್ಯಕೀಯ ಭತ್ಯೆ (ಪ್ರತಿ ಮಾಸಿಕ) ಗ್ರೂಪ್ ಸಿ ಮತ್ತು ಡಿ ವೃಂದಕ್ಕೆ ಪ್ರಸ್ತುತ 200 ಇದೆ. ಪರಿಷ್ಕೃತ ಭತ್ಯೆ 500 ಆಗಲಿದೆ.












Click it and Unblock the Notifications