7th pay commission: ಬಜೆಟ್ ಅಲ್ಲೂ ಇಲ್ಲ, ಸಮ್ಮೇಳನದಲ್ಲೂ ಇಲ್ಲ, ನೌಕರರಿಗೆ ಮತ್ತೆ ಸಿಕ್ಕಿದ್ದು ಭರವಸೆ ಮಾತ್ರ!
ಬೆಂಗಳೂರು, ಫೆಬ್ರವರಿ 27: 7ನೇ ವೇತನ ಆಯೋಗದ ಘೋಷಣೆಯ ಬಗ್ಗೆ ಕಾತುರದಿಂದ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಮತ್ತೆ ನಿರಾಸೆ ಮಾಡಿದೆ. ಬಜೆಟ್‌ನಲ್ಲಿಯೂ ವೇತನ ಆಯೋಗದ ಜಾರಿ ಬಗ್ಗೆ ಘೋಷಣೆ ಮಾಡದೇ, ಈಗ ಸಮಾವೇಶದಲ್ಲಿಯೂ ಬರೀ ಭರವಸೆ ನೀಡಿ ಸುಮ್ಮನಾಗಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಉಂಟಾಗಿರುವ ಆರ್ಥಿಕ ಹೊರೆಯ ನಡುವೆಯೂ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ಬಗ್ಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ತಿಳಿಸಿದ್ದಾರೆ.

ಸಿಕ್ಕಿದ್ದು ಬರೀ ಭರವಸೆ, ಘೋಷಣೆಯಲ್ಲ!
ರಾಜ್ಯದ ಮುಖ್ಯಮಂತ್ರಿ, ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಫೆಬ್ರವರಿ 16 ರಂದು 2024-25ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾದ ಭರವಸೆ ನೀಡಿರಲಿಲ್ಲ. ಈಗ ಸಮಾವೇಶದಲ್ಲಿಯೂ ಈ ಬ್ಗಗೆ ಸ್ಪಷ್ಟವಾಗಿ ಘೋಷಣೆ ಮಾಡದೇಬರೀ ಭರವಸೆ ನೀಡಿದ್ದಾರೆ.
2024-25ನೇ ಸಾಲಿನ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ವರದಿ ಅನುಷ್ಠಾನದ ಕುರಿತು ಹಾಗೂ ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಘೋಷಿಸಿಲ್ಲ. ಈಗಾಗಲೇ 7ನೇ ವೇತನ ಆಯೋಗದ ವರದಿ ಅನುಷ್ಠಾನ ವಿಳಂಬವಾಗಿರುವ ಕಾರಣ ಶೀಘ್ರದಲ್ಲೇ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರು ಬಜೆಟ್ ಮಂಡನೆ ವೇಳೆ ಆಗ್ರಹಿಸಿದ್ದರು.

ಸಮಾವೇಶದಲ್ಲಿ ವೇತನ ಆಯೋಗದ ಜಾರಿ ಘೋಷಣೆಗೆ ಕಾದಿದ್ದ ನೌಕರರು!
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದಾರೆ. ಆದರೆ, ನೌಕರರು ನಿರೀಕ್ಷಿಸಿದ್ದು ಮಾತ್ರ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾದ ಭರವಸೆ. ಆದರೆ, ಸಿದ್ದರಾಮಯ್ಯ ಅವರು ಈ ಬಗ್ಗೆ ಇಲ್ಲಿಯೂ ಸ್ಪಷ್ಟತೆ ನೀಡಿಲ್ಲ.
"ಕೇಂದ್ರ ಸರ್ಕಾರ ನಿರ್ಧರಿಸಿದಂತೆ ತುಟ್ಟಿಭತ್ಯೆಯನ್ನು ಯಾವುದೇ ವಿಳಂಬವಿಲ್ಲದೇ ರಾಜ್ಯದಲ್ಲಿ ನೀಡಲಾಗುತ್ತಿದೆ. ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆಯೂ ಶೀಘ್ರದಲ್ಲಿ ತೀರ್ಮಾನಿಸಲಾಗುವುದು" ಎಂಬ ವಿಷಯಗಳ ಬಗ್ಗೆ ಮಾತನಾಡಿದ ಅವರು, 7ನೇ ವೇತನ ಆಯೋಗದ ವರದಿ ಜಾರಿ ಬಗ್ಗೆ ಮಾತನಾಡಿಲ್ಲ.
ನ್ಯಾಯ ಮೊದಲು, ಬೇಡಿಕೆ ಆಮೇಲೆ ಎಂದ ಸಿದ್ದರಾಮಯ್ಯ!
ನೌಕರರ ಸಮಾವೇಶದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಆದರೆ ಅದೇ ಮೊದಲ ಆದ್ಯತೆ ಅಲ್ಲ. ಅನ್ಯಾಯಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ ಎಂದಿದ್ದಾರೆ. ಅಂದರೆ, ಮೊದಲು ಅನ್ಯಾಯ ಸರಿಪಡಿಸುವುದು, ಬೇಡಿಕೆಗಳನ್ನ ಆಮೇಲೆ ನೊಡುವ ಎನ್ನುವ ಧಾಟಿಯಲ್ಲಿದ್ದು, ಇದು ಇನ್ಯಾವಾಗ ವೇತನ ಆಯೋಗದ ವರದಿ ಜಾರಿ ಎನ್ನುವ ಪ್ರಶ್ನೆಯನ್ನು ಮತ್ತೆ ನೌಕರರ ತಲೆಗೆ ತುಂಬಿದೆ.
"ಸರ್ಕಾರಿ ನೌಕರರ ಸಮಸ್ಯೆಗಳನ್ನು ತಿಳಿದು ನಾವೇ 6ನೇ ವೇತನ ಆಯೋಗವನ್ನು ರಚಿಸಿದ್ದೆವು. 6ನೇ ವೇತನ ಆಯೋಗದಲ್ಲಿ ಶೇ. 30ರಷ್ಟು ಫಿಟ್ಮೆಂಟ್ ಸೌಲಭ್ಯ ನೀಡಲು 10,500 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. ಈಗ 7 ನೇ ವೇತನ ಆಯೋಗದ ಮಧ್ಯಂತರ ವರದಿಯಂತೆ 17% ಹೆಚ್ಚಳ ಮಾಡಲಾಗಿತ್ತು. ಆಯೋಗದ ಅಂತಿಮ ವರದಿ ನೀಡಲು ಇನ್ನಷ್ಟು ಕಾಲಾವಕಾಶ ಬೇಕೆಂದು ಆಯೋಗದ ಆಧ್ಯಕ್ಷರು ಹೇಳಿದ್ದು, ಮಾರ್ಚ್ 15 ರವರೆಗೆ ವರದಿ ನೀಡಲು ಸಮಯಾವಕಾಶ ನೀಡಲಾಗಿದೆ.ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.











Click it and Unblock the Notifications