70ನೇ ಸ್ವಾತಂತ್ರ್ಯೋತ್ಸವ : ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 15 : 'ಕರ್ನಾಟಕದ ಪ್ರಮುಖ ನಗರಗಳಲ್ಲಿ ಉಚಿತ ವೈಫೈ ಹಾಟ್‌ಸ್ಪಾಟ್‌ ಹಾಗೂ ಎಲ್ಲಾ ಪಂಚಾಯಿತಿಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.[ಚಿತ್ರಗಳು : 70ನೇ ಸ್ವಾತಂತ್ರ್ಯೋತ್ಸವ]

70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸೋಮವಾರ ಧ್ವಜಾರೋಹಣ ನಡೆಸಿದ ಮುಖ್ಯಮಂತ್ರಿಗಳು ರಾಜ್ಯವನ್ನು ಉದ್ದೇಶಿಸಿ ಮಾತನಾಡಿದರು. '2018ರ ಅಕ್ಟೋಬರ್ 2ರ ಹೊತ್ತಿಗೆ ರಾಜ್ಯದ ಗ್ರಾಮೀಣ ಪ್ರದೇಶವನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತ ಮಾಡುವ ಗುರಿ ಇದೆ' ಎಂದರು.[70ನೇ ಸ್ವಾತಂತ್ರ್ಯೋತ್ಸವ : ಮೋದಿ ಭಾಷಣದ ಮುಖ್ಯಾಂಶಗಳು]

siddaramaiah

ಭಾಷಣದ ಮುಖ್ಯಾಂಶಗಳು

* ಈ ವರ್ಷದ ಜನವರಿಯಿಂದ ಜೂನ್ ತನಕ 67,757 ಕೋಟಿ ರೂಪಾಯಿ ಬಂಡವಾಳವು ರಾಜ್ಯದಲ್ಲಿ ಹೂಡಿಕೆಯಾಗಿ, ಇಡೀ ದೇಶದಲ್ಲಿಯೇ ನಮ್ಮ ಕರ್ನಾಟಕವು ಮೊದಲ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು 'ಇನ್ವೆಸ್ಟ್ ಕರ್ನಾಟಕ ಫೋರಂ' ಸಂಸ್ಥೆಯನ್ನು ಸ್ಥಾಪಿಸಲಾಗಿದೆ. [ಸಹಬಾಳ್ವೆ ತತ್ವವನ್ನು ಕಾಪಾಡಲು ಕರೆ ನೀಡಿದ ರಾಷ್ಟ್ರಪತಿ]

* ಬರಪೀಡಿತ 18 ಜಿಲ್ಲೆಗಳಿಗೆ ಭೇಟಿ ನೀಡಿ ನಾನು ಜನರ ಕಷ್ಟಗಳನ್ನು ಆಲಿಸಿದ್ದೇನೆ. ಕುಡಿಯುವ ನೀರು ಮತ್ತು ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು ಮತ್ತು ಔಷಧಿ ಒದಗಿಸುವ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದೇನೆ. ಬರಗಾಲದ ಕಾರಣಕ್ಕಾಗಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಪಾವತಿಯನ್ನು ಒಂದು ವರ್ಷ ಮುಂದೂಡಲಾಗಿದೆ.

* ಮುಂದಿನ ಎರಡು ವರ್ಷಗಳಲ್ಲಿ ಮಂಗಳೂರು, ಗದಗ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ನಗರಗಳಲ್ಲಿ 50 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅಂತೆಯೇ, ಮೈಸೂರು ನಗರದಲ್ಲಿ 100 ಹಾಸಿಗೆಗಳ ಹೈ-ಟೆಕ್ ಪಂಚಕರ್ಮ ಆಸ್ಪತ್ರೆ ಹಾಗೂ 100 ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು.

* ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 1 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ಕೊಡುವ ಹಾಗೂ ಬಡತನ ರೇಖೆಗಿಂತಲೂ ಕೆಳಗಿರುವ ಪಡಿತರ ಚೀಟಿ ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ 1 ಕೆಜಿ ತೊಗರಿಬೇಳೆ ನೀಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.

* ಗುಡಿಸಲು ಮುಕ್ತ ಕರ್ನಾಟಕದ ಕನಸು ನನಸುಗೊಳಿಸುವಲ್ಲಿ ನಮ್ಮ ಸರ್ಕಾರ ಯಶಸ್ಸಿನ ಹಾದಿಯಲ್ಲಿದೆ. 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಬೇಕೆಂಬುದು ನಮ್ಮ ಗುರಿಯಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ 8.5 ಲಕ್ಷ ಮನೆಗಳನ್ನು ನಿರ್ಮಿಸಿ ದಾಖಲೆ ಮಾಡಿದೆ. ಇದೇ ಅವಧಿಯಲ್ಲಿ 32 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ.

independence day

* ಬೆಂಗಳೂರಿನ ಯಲಹಂಕದಲ್ಲಿ 370 ಮೆಗಾ ವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ 12,000 ಎಕರೆ ಪ್ರದೆಶದಲ್ಲಿ 2000 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ಉದ್ಯಾನ (ಸೋಲಾರ್ ಪಾರ್ಕ್) ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

* ನಾಡಿನ ಜಲ-ನೆಲ-ಭಾಷೆಯ ವಿಚಾರದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗಟ್ಟಿನ ಪ್ರದರ್ಶನ ಮಾಡಿಕೊಂಡು ಬಂದ ಆರೋಗ್ಯಕರ ಪರಂಪರೆ ನಮ್ಮದು. ಕೃಷ್ಣಾ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಇದೇ ರೀತಿಯಲ್ಲಿ ನಾವು ಎದುರಿಸಿದ್ದೇವೆ. ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ವ್ಯಕ್ತಪಡಿಸಿದ ಒಮ್ಮತದ ಸಹಕಾರಕ್ಕೆ ನಾನು ಅಭಾರಿಯಾಗಿದ್ದೇನೆ.

* ಬೆಂಗಳೂರು ನಗರದ ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ಚಿಕ್ಕಬಳ್ಳಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ 5 ಕೆರೆಗಳು ಹಾಗೂ ಕೋಲಾರ ಜಿಲ್ಲೆಯ 121 ಕೆರೆಗಳು ಒಳಗೊಂಡಂತೆ ಒಟ್ಟು 126 ಕೆರೆಗಳಿಗೆ ನೀರು ತುಂಬಿಸುವ 1,280 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

* ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸುಮಾರು 60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುತ್ತಿರುವ ಬೆಂಗಳೂರು ನಗರದ ಸಂಸ್ಕರಿಸಿದ ಕೊಳಚೆ ನೀರನ್ನು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ 240 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

* ಮನೆಗೊಂದು ಶೌಚಾಲಯ ರಾಜ್ಯ ಸರ್ಕಾರದ ಧ್ಯೇಯವಾಗಿದ್ದು, ಕಳೆದ 3 ವರ್ಷಗಳಲ್ಲಿ ಸುಮಾರು 21 ಲಕ್ಷ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ 2 ವರ್ಷಗಳಲ್ಲಿ 21 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣಗೊಳಿಸಲಾಗುವುದು.

* ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಅವಕಾಶಗಳ ತವರೂರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ನಮ್ಮ ಮೆಟ್ರೋದ ಮೊದಲ ಹಂತದ ಎಲ್ಲಾ ಕಾಮಗಾರಿಗಳೂ ಇದೇ ವರ್ಷದ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿವೆ.

* ಪೊಲೀಸ್ ಸಿಬ್ಬಂದಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸಲು ತಲಾ 15 ಲಕ್ಷ ರೂ ವೆಚ್ಚದಲ್ಲಿ ರಾಜ್ಯ ಸರ್ಕಾರ ಈವರೆಗೆ 659 ಕೋಟಿ ರೂ ವೆಚ್ಚದಲ್ಲಿ 4,316 ಮನೆಗಳನ್ನು ನಿರ್ಮಿಸಿದೆ. ಒಟ್ಟು 11,000 ಮನೆಗಳನ್ನು ನಿರ್ಮಿಸಲು 1,818 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ಹತ್ತು ತಿಂಗಳಲ್ಲಿ ಪೊಲೀಸರ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ.

ಭಾಷಣದ ಪೂರ್ಣಪಾಠ ಇಲ್ಲಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah delivers 70th Independence Day address from the Manik shah parade ground in Bengaluru on August 15, 2016. Here are the highlights.
Please Wait while comments are loading...