Breaking News: ಕರ್ನಾಟಕದಲ್ಲಿ 14ಕ್ಕೆ ಏರಿದ ಓಮಿಕ್ರಾನ್ ಪ್ರಕರಣ ಸಂಖ್ಯೆ
ಬೆಂಗಳೂರು, ಡಿಸೆಂಬರ್ 18: ಕರ್ನಾಟಕದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಹರಡುವಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶನಿವಾರ ಒಂದೇ ದಿನ 6 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯು 14ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎರಡು ಶಿಕ್ಷಣ ಸಂಸ್ಥೆಗಳು ಕೊವಿಡ್-19 ಕ್ಲಷ್ಟರ್ ಆಗಿವೆ. ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 33 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಐವರಲ್ಲಿ ಓಮಿಕ್ರಾನ್ ರೂಪಾಂತರ ತಳಿ ಅಂಟಿರುವುದು ಜೀನೋಮ್ ಸೀಕ್ವೆನ್ಸಿಂಗ್ ವೇಳೆ ಖಾತ್ರಿಯಾಗಿದೆ.
ಜಿಲ್ಲೆಯ ಒಂದು ಶಿಕ್ಷಣ ಸಂಸ್ಥೆಯಲ್ಲಿ 14 ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ನಾಲ್ವರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇನ್ನೊಂದು ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 19 ಕೊವಿಡ್-19 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಒಬ್ಬರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಇದರ ಜೊತೆ ಯುನೈಟೆಡ್ ಕಿಂಗ್ ಡಮ್ ಪ್ರಯಾಣದ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಇಬ್ಬರು ಓಮಿಕ್ರಾನ್ ಸೋಂಕಿತರು ಗುಣಮುಖ:
ಕರ್ನಾಟಕದಲ್ಲಿ ಈವರೆಗೂ 14 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇಬ್ಬರು ಓಮಿಕ್ರಾನ್ ಸೋಂಕಿತರಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿದ್ದು, ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಒಬ್ಬ ಸೋಂಕಿನು ದುಬೈಗೆ ಪ್ರಯಾಣಿಸಿದ್ದು, ರಾಜ್ಯದಲ್ಲಿ ಸದ್ಯಕ್ಕೆ 11 ಓಮಿಕ್ರಾನ್ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
Two cluster outbreaks of COVID have been reported from two educational institutions in Dakshina Kannada today:
— Dr Sudhakar K (@mla_sudhakar) December 18, 2021
Cluster 1: 14 cases (of which 4 are Omicron)
Cluster 2: 19 cases (1 is Omicron)
A traveller from UK has also tested positive for #Omicron@BSBommai#Omicronindia
ಗುರುವಾರ ರಾಜ್ಯದಲ್ಲಿ ಐದು ಪ್ರಕರಣ ವರದಿ:
ಕಳೆದ ಗುರುವಾರವಷ್ಟೇ ರಾಜ್ಯದಲ್ಲಿ ಐದು ಹೊಸ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. "ರಾಜ್ಯದಲ್ಲಿ ಇನ್ನೂ ಐವರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಯುಕೆಯಿಂದ ವಾಪಾಸ್ ಬಂದ 19 ವರ್ಷದ ವ್ಯಕ್ತಿಯಲ್ಲಿ, ದೆಹಲಿಯಿಂದ ವಾಪಾಸ್ ಬಂದ 36 ವರ್ಷದ ವ್ಯಕ್ತಿಯಲ್ಲಿ, ದೆಹಲಿಯಿಂದ ಬಂದ 70 ವರ್ಷದ ಮಹಿಳೆಯಲ್ಲಿ, ನೈಜಿರಿಯಾದಿಂದ ಬಂದ 52 ವರ್ಷದ ವ್ಯಕ್ತಿಯಲ್ಲಿ, ದಕ್ಷಿಣ ಆಫ್ರಿಕಾದಿಂದ ಬಂದ 33 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ," ಎಂದು ಕೆ ಸುಧಾಕರ್ ಹೇಳಿದ್ದರು.
ದಕ್ಷಿಣ ಆಫ್ರಿಕಾದಿಂದ ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿರುವ 66 ವರ್ಷದ ಓರ್ವ ವೃದ್ಧ ಹಾಗೂ 46 ವರ್ಷದ ವ್ಯಕ್ತಿಗೆ ಸೋಂಕು ಕಂಡು ಬಂದಿತ್ತು. ಓಮಿಕ್ರಾನ್ ಪ್ರಕರಣ ಪತ್ತೆ ಹಚ್ಚಲು ಜಿನೋಮ್ ಪರೀಕ್ಷೆ ಸೇರಿದಂತೆ ಹೆಚ್ಚಿನ ತಪಾಸಣೆಗೆ ಸ್ಯಾಂಪಲ್ ಗಳನ್ನು ಕಳಿಸಲಾಗಿತ್ತು. ಇಂದು(ಡಿ.2) ಓಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು.












Click it and Unblock the Notifications