ನಕ್ಸಲರ ಶರಣಾಗತಿ ನಡುವೆ ವಿಕ್ರಂ ಗೌಡ ಸಹೋದರಿಯಿಂದ ಸರ್ಕಾರಕ್ಕೆ ವಿಶೇಷ ಮನವಿ, ಏನದು ?
6 Naxal Surrender: ಕರ್ನಾಟಕದಲ್ಲಿ ನಕ್ಸಲ್ ಶರಣಾಗತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗುತ್ತಿದೆ. ಇದರ ನಡುವೆ ಈಚೆಗೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ನಕ್ಸಲ್ ನಾಯಕ ವಿಕ್ರಂ ಗೌಡ ಅವರ ತಂಗಿ ಸುಗುಣ ಅವರು ಸರ್ಕಾರ ನಮಗೂ ಪರಿಹಾರ ಕೊಡಲಿ ಎಂದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಮುಂದೆ ಕರ್ನಾಟಕದ ಹಾಗೂ ದಕ್ಷಿಣ ಭಾರತದ ವಿವಿಧ ನಕ್ಸಲರ ಶರಣಾಗುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ ವಿಕ್ರಂ ಗೌಡ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ. ನಕ್ಸಲರ ಶರಣಾಗುತ್ತಿರುವುದು ಸಹ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ನ ನಂತರವೇ. ಹೀಗಾಗಿ ಈ ಎರಡೂ ವಿಚಾರ ಇದೀಗ ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಏನಿದು ಎನ್ನುವ ವಿವರ ಇಲ್ಲಿದೆ..
ಕರ್ನಾಟಕ ನಕ್ಸಲ್ ಹಾವಳಿಯಿಂದ ಸಂಪೂರ್ಣವಾಗಿ ಮುಕ್ತವಾಗುವ ದಿನಗಳು ಬರುತ್ತಿವೆ. ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುವುದಕ್ಕೆ ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ನಕ್ಸಲ್ ನಿಗ್ರಹ ಪಡೆಗಳು ಈ ನಿಟ್ಟಿನಲ್ಲಿ ಮಹತ್ವದ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಇನ್ನು ವಿಕ್ರಂ ಗೌಡ ಅವರ ಸಹೋದರಿ ಇದೇ ಸಂದರ್ಭದಲ್ಲಿ ಸರ್ಕಾರ ನಮಗೂ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಎನ್‌ಕೌಂಟರ್ ಆಗಿ, ಜೀವ ಸಹ ಹೋಗಿದೆ. ಯಾರಿಂದಲೂ ಜೀವ ವಾಪಸ್ ಕುಡುವುದಕ್ಕೆ ಸಾಧ್ಯವಿಲ್ಲ. ಆದರೆ ಅವರಿಗೆ ಪರಿಹಾರ ಕೊಡುವುದಾದರೆ ನಮಗೂ ಕೊಡಲಿ ಎಂದು ಹೇಳಿದ್ದಾರೆ. ಶರಣಾಗುತ್ತಿರುವವರಿಗೆ ಕೊಡುತ್ತಿರುವ ಪರಿಹಾರವನ್ನು ನಮಗೂ ಕೊಡಬೇಕು. ಯಾಕೆಂದರೆ ನಾವು ಸಂಕಷ್ಟದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

ಈ ನಡುವೆ ಶರಣಾಗುತ್ತಿರುವ ನಕ್ಸಲರಿಗೆ ಪರಿಹಾರ ಕೊಡುತ್ತಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ವಿಕ್ರಂಗೌಡ ಅವರ ಸಹೋದರಿ ಸಹ ಪರಿಹಾರ ಕೇಳಿದ್ದಾರೆ. ನಮ್ಮ ಅಣ್ಣನ ಜೀವವನ್ನು ವಾಪಸ್ ತರುವುದಕ್ಕೆ ಸಾಧ್ಯವಿಲ್ಲ. ಕನಿಷ್ಠ ಪರಿಹಾರವನ್ನಾದರೂ ಕೊಡಲಿ ಎಂದಿದ್ದಾರೆ.
2024ರ ನವೆಂಬರ್ 19ಕ್ಕೆ ಕರ್ನಾಟಕದ ಹೆಬ್ರಿ ಠಾಣಾ ವ್ಯಾಪ್ತಿಗೆ ಬರುವ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕ ಹಾಗೂ ಮೋಸ್ಟ್‌ವಾಂಟೆಡ್ ವಿಕ್ರಂ ಗೌಡ ಅವರನ್ನು ಎನ್‌ಕೌಂಟರ್ ಮಾಡಲಾಗಿತ್ತು.
ಸ್ವಂತ ಮನೆ ಬೇಕಿದೆ: ವಿಕ್ರಂ ಗೌಡ ಅವರ ತಂಗಿ ನಮಗೆ ಒಂದು ಸ್ವಂತ ಮನೆ ಇಲ್ಲ. ತೀರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಒಂದೇ ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೂ, ಜೀವನ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ನಮಗೂ ಸರ್ಕಾರ ಪರಿಹಾರ ಕೊಡಬೇಕು ಅಂತ ಮನವಿ ಮಾಡಿದ್ದಾರೆ.
ನಕ್ಸಲರ ಶರಣಾಗತಿ: ಇನ್ನು ಕರ್ನಾಟಕದಲ್ಲಿ ಆರು ಜನ ನಕ್ಸಲರು ಶರಣಾಗುತ್ತಿದ್ದಾರೆ. ಆದರೆ ಇವರಿಗೆ ಪರಿಹಾರ ಘೋಷಿಸಲು ಸರ್ಕಾರ ಮುಂದಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ನಕ್ಸಲರು ಸರ್ಕಾರಕ್ಕ ಶರಣಾಗುತ್ತಿದ್ದಾರೋ, ಇಲ್ಲ ಸರ್ಕಾರ ನಕ್ಸಲರಿಗೆ ಶರಣಾಗುತ್ತಿದೆಯೋ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಇತ್ತೀಚಿನ ವರದಿಯ ಪ್ರಕಾರ, ಆರು ಜನ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರ ಮುಂದೆ ಶರಣಾಗಲಿದ್ದಾರೆ ಎನ್ನಲಾಗಿದೆ.
ಶರಣಾಗಲಿರುವ ಆರು ಜನ ನಕ್ಸಲರ ವಿವರ: ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಕರ್ನಾಟಕದ ಮರೆಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ್ ಮತ್ತು ಕೇರಳದ ಜೀಶಾ ಎನ್ನುವ ನಕ್ಸಲರು ಸರ್ಕಾರದ ಮುಂದೆ ಶರಣಾಗಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications