ರಾಜ್ಯದಲ್ಲಿ 50 ಹೊಸ ಮಿನಿ ವಿಧಾನಸೌಧ ನಿರ್ಮಾಣ: ದೇಶಪಾಂಡೆ
ಬೆಂಗಳೂರು, ಜು.9: ಕಳೆದ ಆರ್ಥಿಕ ಸಾಲಿನಲ್ಲಿ ರಾಜ್ಯದಲ್ಲಿ ನೂತನವಾಗಿ ಘೋಷಿಸಲಾದ 50 ತಾಲ್ಲೂಕುಗಳಲ್ಲಿ ಮಿನಿ ವಿಧಾನ ಸೌಧದ ಕಟ್ಟಡ ಕಾಮಗಾರಿಗಳಿಗೆ ಈಗಾಗಲೇ ತಾಲ್ಲೂಕುಗಳಲ್ಲಿ ಸ್ಥಳ ಗುರುತಿಸಲಾಗಿದೆ. ಇನ್ನು ಕೆಲವು ಕಡೆ ಸ್ಥಳ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವರ ಆರ್.ವಿ. ದೇಶಪಾಂಡೆ ಅವರು ತಿಳಿಸಿದರು.
ಸೋಮವಾರ ಸದನದಲ್ಲಿ ಹೊಸ ತಾಲ್ಲೂಕುಗಳ ಅಭಿವೃದ್ಧಿ ಕುರಿತಂತೆ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹಾಗೂ ಅನೂರ್ ಶಾಸಕ ಆರ್. ನರೇಂದ್ರ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಮಾತನಾಡಿದ ಸಚಿವರು ಜಿಲ್ಲಾ ಹಂತದಲ್ಲಿ ಸ್ಥಳಗುರುತಿಸಿ ಅಂದಾಜು ಪಟ್ಟಿ ಮತ್ತು ನಕ್ಷಯೊಂದಿಗೆ ಪ್ರಸ್ತಾವನೆಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ ಕೂಡಲೇ ಅನುದಾನ ಲಭ್ಯತೆಯನ್ನಾಧರಿಸಿ ಹೊಸ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

ಹೊಸದಾಗಿ ಘೋಷಿಸಲಾದ 50 ತಾಲ್ಲೂಕುಗಳಿಗೆ ಕಾರ್ಯಾರಂಭ ಮತ್ತು ಆಡಳಿತಾತ್ಮಕ ಪ್ರಕ್ರಿಯೆ ಪ್ರಾರಂಭಿಸಲು ತಲಾ ರೂ. 10.00 ಲಕ್ಷಗಳ ಅನುದಾನವನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಬಿಡುಗಡೆ ಮಾಡಲಾಗಿರುತ್ತದೆ ಎಂದು ಸದನಕ್ಕೆ ತಿಳಿಸಿದರು.












Click it and Unblock the Notifications