ಬಿಎಸ್ ವೈ ವರ್ಸಸ್ ಎಂಬಿ ಪಾಟೀಲ್ ಫೈಟಿಗೆ ಲಿಂಗಾಯತ ರಾಜಕಾರಣದ ತಳುಕು
ಬೆಂಗಳೂರು, ಜುಲೈ 6: ಯಡಿಯೂರಪ್ಪನವರು ಏಕವಚನದಲ್ಲಿ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲರನ್ನು ತರಾಟೆಗೆ ತೆಗೆದುಕೊಂಡಿರುವುದು, ಜಲ ಸಂಪನ್ಮೂಲ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವುದು ಇವೆಲ್ಲವನ್ನೂ ಗಮನಿಸಿದರೆ ಪಾಟೀಲರನ್ನೇ ಗುರಿ ಮಾಡಿಕೊಂಡ ಹಾಗಿದೆ ಬಿಎಸ್ ವೈ. ಏಕೆ ಹಾಗೆ ಗುರಿ ಮಾಡಿಕೊಂಡು ದಾಳಿ ನಡೆಸಬೇಕು?
ಎಂಬಿ ಪಾಟೀಲರು ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದಾರಾ? ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಸಡ್ಡು ಹೊಡೆಯುವ ಮಟ್ಟಕ್ಕೆ ಅವರ ಬೆಳವಣಿಗೆ ಆಗುತ್ತಿದೆಯಾ? ಆ ಕಾರಣದಿಂದಲೇ ಸಿಟ್ಟಾಗುತ್ತಿದ್ದಾರಾ ಯಡಿಯೂರಪ್ಪ?
ಸ್ವತಃ ಪಾಟೀಲರೇ ನೀಡುತ್ತಿರುವ ಕಾರಣ ಹಾಗೂ ಯಡಿಯೂರಪ್ಪನವರು ದಿಢೀರನೆ ಪಾಟೀಲರ ವಿರುದ್ಧ ಹರಿ ಹಾಯುತ್ತಿರುವುದು ನೋಡಿದರೆ ಖಂಡಿತ ಹಾಗನ್ನಿಸುತ್ತದೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಎಂಬಿ ಪಾಟೀಲ್, ಯಡಿಯೂರಪ್ಪನವರ ಸಿಟ್ಟಿಗೆ ಇವು ಕಾರಣಗಳು ಎಂದು ತೆರೆದಿಟ್ಟರು.
ಅವರೇನೋ ನಾಲ್ಕು ಕಾರಣಗಳು ಅಂತ ಹೇಳ್ತಿದ್ದಾರೆ. ಆದರೆ ಮುಖ್ಯಮಂತ್ರಿ ಗದ್ದುಗೆ ಏರಿದ್ದ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಆಗಿರುವ ಯಡಿಯೂರಪ್ಪನವರಿಗೆ ಎಂಬಿ ಪಾಟೀಲರು ಸಮ ಆಗುವುದಕ್ಕೆ ಸಾಧ್ಯವೆ? ಇದನ್ನು ಮಾತ್ರ ಜನರೇ ನಿರ್ಧರಿಸಬೇಕು. ಇಲ್ಲಿ ಪಾಟೀಲರು ನೀಡಿದ ಆ ನಾಲ್ಕು ಕಾರಣ ಏನು ಅಂತ ಓದಿಕೊಂಡು ಬಿಡಿ.

ಲಿಂಗಾಯತರ ಹೆಚ್ಚಿನ ಮತಗಳು ಕಾಂಗ್ರೆಸ್ ಪರ ವಾಲಿದ್ದವು
ಗುಂಡ್ಲುಪೇಟೆ ಉಪಚುನಾವಣೆ ವೇಳೆಯಲ್ಲಿ ಗೀತಾ ಮಹದೇವಪ್ರಸಾದ್ ಪರವಾಗಿ ಚುನಾವಣೆ ಪ್ರಚಾರ ನಡೆಸಿದ್ದರು ಎಂ.ಬಿ.ಪಾಟೀಲರು. ಆಗ ಲಿಂಗಾಯತರ ಹೆಚ್ಚಿನ ಮತಗಳು ಕಾಂಗ್ರೆಸ್ ಪರ ವಾಲಿದವು. ಇದರಿಂದ ಪಕ್ಷ ಗೆಲುವು ಸಾಧಿಸಲು ನೆರವು ಆದಂತಾಯಿತು. ಅದು ಮೊದಲನೇ ಕಾರಣ ಅಂತಾರೆ ಪಾಟೀಲರು.

ಬಸವಣ್ಣ ಅವರ ಚಿತ್ರವನ್ನು ಕಡ್ಡಾಯ
ಇನ್ನು ಈಚೆಗೆ ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು ಎಂದು ರಾಜ್ಯ ಸರಕಾರ ಘೋಷಣೆ ಮಾಡಿತ್ತು. ಆ ನಿರ್ಧಾರದ ಹಿಂದೆ ಪಾಟೀಲರ ಮನವಿ ಇತ್ತಂತೆ. ಆ ಮನವಿಗೆ ಸಿದ್ದರಾಮಯ್ಯ ತಕ್ಷಣವೇ ಸ್ಪಂದಿಸಿದ್ದಾರೆ. ಇದು ಎರಡನೇ ಕಾರಣ.

ಮಹಿಳಾ ವಿವಿಗೆ ಅಕ್ಕ ಮಹಾದೇವಿ ಹೆಸರು
ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಹೆಸರಿಟ್ಟಿದ್ದರ ಹಿಂದೆ ಕೂಡ ಪಾಟೀಲರ ಪಾತ್ರವಿದೆಯಂತೆ. ಅವರು ಕೊಟ್ಟ ಭರವಸೆಯಂತೆ ನಡೆದುಕೊಂಡಿದ್ದಾರೆ ಎಂಬುದು ಮೂರನೇ ಕಾರಣ.

ಕೂಡಲಸಂಗಮದ ಕಾಂಗ್ರೆಸ್ ಸಮಾವೇಶ
ಕೂಡಲಸಂಗಮದಲ್ಲಿ ಕಾಂಗ್ರೆಸ್ ನ ಭರ್ಜರಿ ಸಮಾವೇಶ ನಡೆಸಿದ್ದರ ಹಿಂದಿನ ಶಕ್ತಿ ಎಂ.ಬಿ.ಪಾಟೀಲರಂತೆ. ಈ ಸಮಾವೇಶದ ಆಯೋಜನೆಗೆ ಕೆಲಸ ಮಾಡಿದ್ದರಂತೆ. ಈ ರೀತಿ ಲಿಂಗಾಯತ ಸಮುದಾಯದಲ್ಲಿ ಗುರುತಿಸಿಕೊಳ್ಳುವಂಥ ಕೆಲಸ ಮಾಡಲಾರಂಭಿಸಿದ್ದರಿಂದ ಪಾಟೀಲರ ಬಗ್ಗೆ ಯಡಿಯೂರಪ್ಪ ಅವರಿಗೆ ಅಸಮಾಧಾನ ಇದೆ ಎಂದು ಸ್ವತಃ ಸಚಿವರಿಗೆ ಅನ್ನಿಸಿದೆ.












Click it and Unblock the Notifications