262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
ಬೆಂಗಳೂರು, ಆಗಸ್ಟ್ 31; ಕರ್ನಾಟಕ ಸರ್ಕಾರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಸೆಪ್ಟೆಂಬರ್‌ನಿಂದ 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸುವ ಕುರಿತು ಆದೇಶ ಹೊರಡಿಸಲಾಗಿದೆ.
ನಿರ್ದೇಶಕರು (ಗುಣಮಟ್ಟ), ಸಮಗ್ರ ಶಿಕ್ಷಣ, ಕರ್ನಾಟಕ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶ ರಾಜ್ಯದ ಆಯ್ದ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ) ಪ್ರಾರಂಭಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ. 2023-24ನೇ ಸಾಲಿನ ವಾರ್ಷಿಕ ಯೋಜನಾ ಮಂಡಳಿ ಅನುಮೋದನೆಯ ನಡವಳಿ ದಿನಾಂಕ 17/04/2023 ಉಲ್ಲೇಖಿಸಲಾಗಿದೆ.

2023-24ನೇ ಸಾಲಿನ ವಾರ್ಷಿಕ ಯೋಜನಾ ಮಂಡಳಿಯಲ್ಲಿ 300 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಯೋಜನೆಯನ್ನು ಸಲ್ಲಿಸಲಾಗಿತ್ತು. ಈ 300 ಶಾಲೆಗಳಲ್ಲಿ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ)ಗಳನ್ನು ಪ್ರಾರಂಭಿಸಲು ದಿನಾಂಕ 17/04/2023ರ ನಡವಳಿಯಲ್ಲಿ ಅನುಮೋದನೆಯಾಗಿರುತ್ತದೆ ಎಂದು ತಿಳಿಸಲಾಗಿದೆ.
262 ಶಾಲೆಗಳು; ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ಸದರಿ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಯೋಗಿಕವಾಗಿ ಷರತ್ತುಗಳಿಗೆ ಒಳಪಟ್ಟು ಪ್ರಾರಂಭಿಸಲು ಸೂಚನೆಗಳನ್ನು ನೀಡಲಾಗಿತ್ತು. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಯ ಉಪನಿರ್ದೇಶಕರು(ಅಡಳಿತ) ಹಾಗೂ ಉಪಯೋಜನಾ ಸಮನ್ವಯಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನುಮೋದನೆಗೊಂಡ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಪಿ.ಎ.ಬಿಯಿಂದ ಅನೂಮೋದನೆಗೊಂಡ ಅನುದಾನವು ಬಿಡುಗಡೆಯಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸೂಚಿಸಿದೆ. ಪ್ರತಿ ತರಗತಿಯು ಕನಿಷ್ಠ 20 ಮತ್ತು ಗರಿಷ್ಠ 30 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಯೋಗಿಕವಾಗಿ ಷರತ್ತುಗಳಿಗೆ ಒಳಪಟ್ಟು ಆರಂಭಿಸಲಾಗುತ್ತಿದೆ. ಇದಕ್ಕಾಗಿ ಎಸ್‌ಡಿಎಂಸಿಗಳು 10 ತಿಂಗಳ ಅವಧಿಗೆ ಅತಿಥಿ ಶಿಕ್ಷಕರನ್ನು ಮತ್ತು ಆಯಾಗಳನ್ನು ನೇಮಿಸಿಕೊಂಡು ತಿಂಗಳಿಗೆ ಕ್ರಮವಾಗಿ 7000 ರೂ. ಮತ್ತು 5 ಸಾವಿರ ರೂ.ಗಳನ್ನು ಪಾವತಿ ಮಾಡಬೇಕಿದೆ.
ಈ ವರ್ಷ 300 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ವಾರ್ಷಿಕ ಯೋಜನಾ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆದರೆ ಶಿಕ್ಷಣ ಮಂತ್ರಾಲಯವು 262 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತರಗತಿಗಳನ್ನು ಆರಂಭಿಸಲು ಒಪ್ಪಿಗೆ ನೀಡಿತ್ತು.
ಕರ್ನಾಟಕದ ಶಿಕ್ಷಣ ಇಲಾಖೆ ಈಗಾಗಲೇ ಆರ್‌ಟಿಐ ಕಾಯ್ದೆಯ ಅನ್ವಯ 2025-26ನೇ ಸಾಲಿನಿಂದ 1ನೇ ತರಗತಿಗೆ ಮಗು ಪ್ರವೇಶ ಪಡೆಯಲು 6 ವರ್ಷ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು ಎಂದು ಆದೇಶ ಹೊರಡಿಸಿದೆ. ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ಪೂರ್ಣಗೊಂಡಿರಬೇಕು ಎಂದು ಹೇಳಿದೆ. ಈಗ 4 ವರ್ಷ ಪೂರ್ಣಗೊಂಡಿರುವವರನ್ನು ಎಲ್‌ಕೆಜಿಗೆ ಮತ್ತು 5 ವರ್ಷ ಪೂರ್ಣಗೊಂಡಿರುವವರನ್ನು ಯುಕೆಜಿಗೆ ಸೇರಿಸಬಹುದಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವಂತೆ ಪೋಷಕರು ಈ ಹಿಂದಿನಿಂದಲೂ ಬೇಡಿಕೆ ಇಡುತ್ತಿದ್ದರು. ಕರ್ನಾಟಕ ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ಶಾಲೆ ಆರಂಭಿಸಲು ತೀರ್ಮಾನಿಸಿದೆ. ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ಹೆಚ್ಚು ಹಣ ಸುಲಿಗೆ ಮಾಡುತ್ತಾರೆ ಎಂಬುದು ಪೋಷಕರ ಆರೋಪವಾಗಿದೆ.
ನಗರ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಸಮಸ್ಯೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಾಲೆಗಳು ಆರಂಭವಾದರೆ ಪೋಷಕರಿಗೆ ಅನುಕೂಲವಾಗಲಿದೆ.












Click it and Unblock the Notifications