ಬಿಬಿಎಂಪಿ ವ್ಯಾಪ್ತಿಯ 205 ಕೆರೆ ಅಭಿವೃದ್ಧಿ, ಖಾಸಗಿ ಕಂಪನಿಗೆ ಹೊಣೆ
ಬೆಂಗಳೂರು, ಜುಲೈ 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 205 ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ ಕೊನೆಗೂ ಮುಂದಾಗಿದೆ. ತನ್ನಲ್ಲಿರುವ ಆರ್ಥಿಕ ಸಂಪನ್ಮೂಲ ಸಾಲದು ಎಂಬುದನ್ನು ಅರಿತ ಪಾಲಿಕೆ, ಕೆರೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ನೀತಿಯನ್ನು ರೂಪಿಸಿದೆ. ಈ ವಿಚಾರವನ್ನು ಸ್ವತಃ ಸರ್ಕಾರವೇ ಹೈಕೋರ್ಟ್‌ಗೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ, ಕೆರೆ ಜಾಗಗಳ ಒತ್ತುವರಿ ತೆರವುಗೊಳಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಿಟಿಜಲ್ ಆ್ಯಕ್ಷನ್ ಗ್ರೂಪ್ ಹಾಗೂ ಇತರರು 2014ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾ. ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದ್ದವು. ನೀತಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅರ್ಜಿದಾರರು ಸರ್ಕಾರ ಮತ್ತು ಪಾಲಿಕೆಗೆ ಸಲ್ಲಿಸಬಹುದು ಎಂದು ಹೇಳಿ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಲಾಗಿದೆ.

ಪಾಲಿಕೆಗೆ ಹಣ ಹೊಂದಿಸಲಾಗದು: ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಕೆರೆಗಳಿವೆ. ಅವುಗಳ ನಿರ್ವಹಣೆಗೆ ಪಾಲಿಕೆಗೆ ವಾರ್ಷಿಕ ಅಂದಾಜು 30 ಕೋಟಿ ರೂ. ಬೇಕು. ಇಷ್ಟೊಂದು ದೊಡ್ಡ ಮೊತ್ತ ಪ್ರತಿ ವರ್ಷ ಹೊಂದಿಸುವುದು ಪಾಲಿಕೆಗೆ ಕಷ್ಟವಾಗಲಿದೆ ಎಂದರು.
ಆದ್ದರಿಂದ ಕೆರೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಅಂದರೆ, ಖಾಸಗಿಯವರಿಗೆ ಸ್ಥಳೀಯ ನಿವಾಸಿಗಳ ಸಂಘಗಳು, ಸಹಕಾರ ಸಂಘಗಳು, ಎನ್‌ಜಿಓ, ಕಾರ್ಪೊರೇಟ್ ಕಂಪೆನಿಗಳಿಗೆ ವಹಿಸುವ ಸಂಬಂಧ ನೀತಿ ರೂಪಿಸಲಾಗಿದೆ. ಕೆರೆಗಳ ಮಾಲಿಕತ್ವ, ಮೇಲ್ವಿಚಾರಣೆ ಸರ್ಕಾರ ಮತ್ತು ಪಾಲಿಕೆಯದ್ದೆ ಆಗಿರಲಿದೆ. ಯಾವುದೇ ಕಾರಣಕ್ಕೂ ಮಾಲೀಕತ್ವವನ್ನು ಖಾಸಗಿಯವರಿಗೆ ಬಿಟ್ಟುಕೊಡಲಾಗುವುದಿಲ್ಲ.
ಅವರು ಕೆರೆ ನಿರ್ವಹಣೆ ಮತ್ತು ಅಭಿವದ್ಧಿಗೆ ಹಣ ಖರ್ಚು ಮಾಡಬೇಕು ಅಷ್ಟೇ. ಈ ವಿಚಾರವಾಗಿ ಆಸಕ್ತರ ಅಭಿಪ್ರಾಯ ಆಹ್ವಾನಿಸಲಾಗುವುದು, ನಮ್ಮ ಷರತ್ತುಗಳನ್ನು ಒಪ್ಪಿಕೊಂಡವರಿಗೆ ನಿರ್ವಹಣೆಗೆ ಜವಾಬ್ದಾಾರಿ ನೀಡಲಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಸ್ಥಳೀಯ ನಿವಾಸಿಗಳ ಸಂಘಗಳು, ಕೆರೆಯ ಅಕ್ಕಪಕ್ಕದ ನಿವಾಸಿಗಳಿಗೆ ಕರೆಗಳ ನಿರ್ವಹಣೆ ನೀಡುವುದಕ್ಕೆ ನಮ್ಮ ಅಕ್ಷೇಪವಿಲ್ಲ. ಆದರೆ, ಕಾರ್ಪೊರೇಟ್ ಕಂಪನಿಗಳ ವಿಚಾರದಲ್ಲಿ ನಮಗೆ ಕೆಲವು ಅನುಮಾನಗಳಿವೆ. ಅಂತಿಮವಾಗಿ ನಗರದ ಕೆರೆಗಳು ಉಳಿಯಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.
ಆತಂಕ ಬೇಡವೆಂದ ಎಜಿ: ಇದಕ್ಕೆ ಉತ್ತರಿಸಿದ ಅಡ್ವೋಕೇಟ್ ಜನರಲ್, ಸರ್ಕಾರದ ಉದ್ದೇಶವೂ ಕೆರೆಗಳು ಉಳಿಯಬೇಕು, ಅವುಗಳ ನಿರ್ವಹಣೆಗೆ ಉತ್ತಮ ರೀತಿಯಲ್ಲಿ ಆಗಬೇಕು ಎಂದಿದೆ. ಕಾರ್ಪೊರೇಟ್ ಕಂಪೆನಿಗಳ ನೆರವು ನಮಗೆ ಬೇಕು ಏಕೆಂದರೆ ಕೆರೆಗಳ ನಿರ್ವಹಣೆಗೆ ನಮಗೆ ಹಣ ಬೇಕು.
ಆದರೆ, ಅರ್ಜಿದಾರರು ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳಬಾರದು. ಎಲ್ಲವನ್ನೂ ನೀತಿಯಲ್ಲಿ ವಿವರಿಸಲಾಗಿದೆ. ಜತೆಗೆ ಅರ್ಜಿದಾರರ ಬಳಿ ಸಲಹೆಳಿದ್ದರೆ ಅವುಗಳನ್ನು ಸ್ವೀಕರಿಸಿ ನಿಯಮಾನುಸಾರ ಅಳವಡಿಸಿಕೊಳ್ಳಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಭರವಸೆ ನೀಡಿದರು.












Click it and Unblock the Notifications