Dalits Organization: ಕರ್ನಾಟಕ ವಿಧಾನಸಭಾ ಚುನಾವಣೆ: 20ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮಹತ್ವದ ನಿರ್ಧಾರ
ಬೆಂಗಳೂರು, ಏಪ್ರಿಲ್ 20: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯ ರಾಜಕರಣದಲ್ಲಿ ಮಹತ್ವದ ಬೆಳವಣಿಗೆಗೆ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವ ಆಡಳಿತರೂಢ ಬಿಜೆಪಿ ಒಂದೆಡೆಯಾದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹಾಗೂ ಜೆಡಿಎಸ್ ಶತಪ್ರಯತ್ನ ನಡೆಸುತ್ತಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಿಗೆ ಪಕ್ಷಾಂತರ, ಸಂಘಟನೆಗಳ ಬೆಂಬಲ ಜೋರಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿರುವ ಕಾಂಗ್ರೆಸ್‌ನತ್ತ ಅನೇಕ ಸಂಘಟನೆಗಳ ನಾಯಕರು ಹಾಗೂ ಸಂಘಟನೆಗಳು ಒಲವು ತೋರುತ್ತಿದ್ದು, ಇಂದು (ಏಪ್ರಿಲ್ 20) 20 ಕ್ಕೂ ಹೆಚ್ಚು ವಿವಿಧ ದಲಿತ ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡೆಸಿದ ಸುದ್ದಿಗೋಷ್ಟಿಯಲ್ಲಿ ವಿವಿಧ ದಲಿತ ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, 'ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ, ದಲಿತ ಸಮುದಾಯಗಳ ಹಕ್ಕು ರಕ್ಷಣೆ ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ 2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿವೆ' ಎಂದು ತಿಳಿಸಿದ್ದಾರೆ.
ಸುಮಾರು 20 ಕ್ಕೂ ಹೆಚ್ಚು ವಿವಿಧ ದಲಿತ ಸಂಘಟನೆಗಳಿದ್ದು, ಇವರು ಎಲ್ಲ ಸಂಘಟನೆಗಳ ಜೊತೆ ಸೇರಿ ಇಡೀ ರಾಜ್ಯದುದ್ದಗಲದಲ್ಲಿ ಚರ್ಚೆ ಮಾಡಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ತೀರ್ಮಾನ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಯಾವುದೇ ಅಧಿಕಾರಕ್ಕೆ ಆಸೆ ಮಾಡದೇ, ಕೇವಲ ತತ್ವ ಸಿದ್ಧಾಂತಗಳಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ಉಳಿಸಬೇಕು. ಈ ವಿಚಾರವಾಗಿ ಯಾವ ಪಕ್ಷ ಕಾರ್ಯ ನಿರ್ವಹಿಸಲಿದೆ ಆ ಪಕ್ಷದ ಜೊತೆ ನಿಲ್ಲಲ್ಲು ತೀರ್ಮಾನ ಮಾಡಿದ್ದಾರೆ. ಮೇ 6ರಂದು ಇವರು ದೊಡ್ಡ ಸಮಾವೇಶ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ. ಈ ಸಂಘಟನೆಯಲ್ಲಿ ಕೇವಲ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಮಾತ್ರವಲ್ಲ, ಎಲ್ಲಾ ವರ್ಗದ ಜನರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ನಾಯಕರ ಪರವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಎಲ್ಲರೂ ರಾಜ್ಯಾದ್ಯಂತ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು ಎಂದು ಡಿ.ಕೆ ಶಿವಕುಮಾರ್ ದಲಿತ ಸಂಘಟನೆಗಳಿಗೆ ಅಭಿನಂದನೆ ತಿಳಿಸಿದ್ದಾರೆ.












Click it and Unblock the Notifications