ಮಹಿಳೆಯರ ಸುರಕ್ಷತೆಗಾಗಿ 'ಎಲೆಕ್ಟ್ರೋ ಶೂ' ಆವಿಷ್ಕರಿಸಿದ ಹೈದರಾಬಾದ್‌ನ 17ರ ಯುವಕ
ಹೈದರಾಬಾದ್: ಇನೊವೇಶನ್ ಮತ್ತು ಧೈರ್ಯ ಒಂದೆಡೆ ಸೇರಿದಾಗ, ಈ ಜಗತ್ತು ಹೆಚ್ಚು ಸುರಕ್ಷಿತ ಹಾಗೂ ಬಲಿಷ್ಠವಾಗುತ್ತದೆ ಎಂಬುದಕ್ಕೆ ಹೈದರಾಬಾದ್‌ನ ಯುವಕನೊಬ್ಬ ಸಾಕ್ಷಿಯಾಗಿದ್ದಾನೆ. ಇಂದಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಹೆಣ್ಣುಮಕ್ಕಳನ್ನ ರಕ್ಷಣೆ ಮಾಡುವುದೇ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇಂತಹ ಪರಿಸ್ಥಿತಿಯಲ್ಲಿ, ಹೈದರಾಬಾದ್ ಮೂಲದ ಕೇವಲ 17 ವರ್ಷದ ಯುವಕ ಸಿದ್ದಾರ್ಥ್ ಮಂಡಲ್, ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾನೆ.

ಮಹಿಳೆಯರು ಮತ್ತು ಯುವತಿಯರ ಸುರಕ್ಷತೆಯ ಅಗತ್ಯತೆಯನ್ನ ಮನಗಂಡ ಸಿದ್ದಾರ್ಥ್, 'ಎಲೆಕ್ಟ್ರೋ ಶೂ' ಎಂಬ ಅತ್ಯಂತ ವಿನೂತನ ಸ್ಮಾರ್ಟ್ ಶೂ ಒಂದನ್ನ ಕಂಡು ಹಿಡಿದಿದ್ದಾನೆ. ಈ ಸಾಧನವು ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದೆ, ಅತ್ಯಂತ ಆತ್ಮವಿಶ್ವಾಸದಿಂದ ರಸ್ತೆಯಲ್ಲಿ ಓಡಾಡಲು ನೆರವಾಗುತ್ತದೆ. ತಂತ್ರಜ್ಞಾನವನ್ನು ಹೇಗೆ ರಕ್ಷಣಾ ಕವಚವಾಗಿ ಬಳಸಬಹುದು ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ ಎನ್ನಬಹುದು.
ಮಹಿಳೆಯರ ರಕ್ಷಣೆಗೆ 'ಎಲೆಕ್ಟ್ರೋ ಶೂ'
ಈ ಎಲೆಕ್ಟ್ರೋ ಶೂ ಕೇವಲ ಕಾಲಿಗೆ ಹಾಕಿಕೊಳ್ಳುವ ಸಾಮಾನ್ಯ ಶೂ ಅಲ್ಲ, ಇದೊಂದು ಅತ್ಯಾಧುನಿಕ ರಕ್ಷಣಾ ಅಸ್ತ್ರ. ಹೌದು, ತುರ್ತು ಪರಿಸ್ಥಿತಿಯಲ್ಲಿ ಅಥವಾ ಯಾರಾದರೂ ಕಿಡಿಗೇಡಿಗಳು ದಾಳಿ ಮಾಡಲು ಮುಂದಾದಾಗ, ಈ ಸ್ಮಾರ್ಟ್ ಶೂ ತಕ್ಷಣವೇ ಕಾರ್ಯಪ್ರವೃತ್ತವಾಗುತ್ತದೆ. ಈ ಸಾಧನವು ಶೂ ಧರಿಸಿರುವ ಮಹಿಳೆಯ ನಿಖರವಾದ ಸ್ಥಳದ ಮಾಹಿತಿಯನ್ನ ಜಿಪಿಎಸ್ ಮೂಲಕ ಅವರ ಕುಟುಂಬದವರಿಗೆ ಮತ್ತು ಹತ್ತಿರದ ಪೊಲೀಸ್ ಠಾಣೆಗೆ ರವಾನಿಸುತ್ತದೆ.
ಅಷ್ಟೇ ಅಲ್ಲದೆ, ಇದರ ಮತ್ತೊಂದು ವೈಶಿಷ್ಟ್ಯವೆಂದರೆ, ದಾಳಿಕೋರರನ್ನ ಹಿಮ್ಮೆಟ್ಟಿಸಲು ಮತ್ತು ಅವರಿಂದ ತಪ್ಪಿಸಿಕೊಳ್ಳಲು , ಈ ಶೂ ದಾಳಿಕೋರನಿಗೆ ಎಲೆಕ್ಟ್ರಿಕ್ ಶಾಕ್ ಕೂಡ ನೀಡುತ್ತದೆ. ಇದರಿಂದ ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಆ ಸ್ಥಳದಿಂದ ತಪ್ಪಿಸಿಕೊಳ್ಳಲು ಸಮಯ ಸಿಗುತ್ತದೆ.
ಹೆಜ್ಜೆ ಹಾಕಿದಷ್ಟೂ ಚಾರ್ಜ್ ಆಗುವ ಸ್ವಯಂ ಚಾರ್ಜಿಂಗ್ ತಂತ್ರಜ್ಞಾನ
ಈ ಅದ್ಭುತವಾದ ಎಲೆಕ್ಟ್ರೋ ಶೂನ ಮತ್ತೊಂದು ಅತ್ಯಂತ ಆಕರ್ಷಕ ಮತ್ತು ಪ್ರಮುಖ ಅಂಶವೆಂದರೆ, ಇದರ ಬ್ಯಾಟರಿ ಚಾರ್ಜಿಂಗ್ ವ್ಯವಸ್ಥೆ. ಸ್ಮಾರ್ಟ್‌ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳಂತೆ ಇದನ್ನು ವಿದ್ಯುತ್‌ಗೆ ಪ್ಲಗ್ ಮಾಡಿ ಚಾರ್ಜ್ ಮಾಡುವ ಅಗತ್ಯವಿಲ್ಲ. ಬದಲಾಗಿ, ಈ ಶೂ ಧರಿಸಿದವರು ಇಡುವ ಪ್ರತಿಯೊಂದು ಹೆಜ್ಜೆಯ ಮೂಲಕವೂ ಇದು ತನ್ನನ್ನು ತಾನು ಚಾರ್ಜ್ ಮಾಡಿಕೊಳ್ಳುತ್ತದೆ. ನಡೆಯುವಾಗ ಉತ್ಪತ್ತಿಯಾಗುವ ಚಲನ ಶಕ್ತಿಯನ್ನ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ತಂತ್ರಜ್ಞಾನವನ್ನ ಇದರಲ್ಲಿ ಅಳವಡಿಸಲಾಗಿದೆ.
ನಮ್ಮ ಸಣ್ಣ ಸಣ್ಣ ಕಾರ್ಯಗಳು ಕೂಡ ಎಷ್ಟು ದೊಡ್ಡ ಬದಲಾವಣೆಯನ್ನ ತರಬಲ್ಲವು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ದೀರ್ಘಕಾಲದವರೆಗೆ ಯಾವುದೇ ನಿರ್ವಹಣೆಯಿಲ್ಲದೆ ಇದು ಮಹಿಳೆಯರ ರಕ್ಷಣೆಗೆ ಸದಾ ಸಿದ್ಧವಾಗಿರುತ್ತದೆ.
ಯುವ ಪ್ರತಿಭೆಗಳಿಂದ ಮಹಿಳಾ ಸಬಲೀಕರಣದ ಕನಸು ನನಸು
ಸಿದ್ದಾರ್ಥ್ ಮಂಡಲ್ ಅವರಂತಹ ಯುವ ಮತ್ತು ಚುರುಕಾದ ಮನಸ್ಸುಗಳು ಭವಿಷ್ಯದ ಸುರಕ್ಷಿತ ಸಮಾಜಕ್ಕೆ ದಾರಿದೀಪವಾಗುತ್ತಿವೆ. ಇಂತಹ ಅಸಾಧಾರಣ ಯುವ ಪ್ರತಿಭೆಗಳನ್ನು ನಾವು ಪ್ರೋತ್ಸಾಹಿಸಿ, ಬೆಂಬಲಿಸಬೇಕಾದ ಅಗತ್ಯವಿದೆ. ಸಮಾಜದ ಒಳಿತಿಗಾಗಿ ಹುಟ್ಟಿಕೊಳ್ಳುವ ಒಂದು ಸಣ್ಣ ಕಲ್ಪನೆ, ಮುಂದಿಡುವ ಒಂದು ಹೆಜ್ಜೆ ಅಥವಾ ಕಾಣುವ ಒಂದು ಕನಸಿನ ಶಕ್ತಿಯನ್ನ ನಾವು ಎಂದಿಗೂ ಕಡೆಗಣಿಸಬಾರದು.
ಸಿದ್ದಾರ್ಥ್‌ನ ಈ ಪ್ರಯತ್ನವು, ಪ್ರತಿಯೊಬ್ಬ ಹೆಣ್ಣುಮಗಳೂ ನಿರ್ಭಯವಾಗಿ ಮತ್ತು ಸ್ವತಂತ್ರವಾಗಿ ನಡೆಯುವಂತಹ ಜಗತ್ತನ್ನು ನಿರ್ಮಿಸುವ 'ಮಹಿಳಾ ಸಬಲೀಕರಣ'ದ ಕನಸಿಗೆ ದೊಡ್ಡ ಶಕ್ತಿ ತುಂಬಿದೆ.


Click it and Unblock the Notifications
