Karnataka Rains : ಕರ್ನಾಟಕದ ಮೇಲೆ ಮಾಂಡೌಸ್ ಸೈಕ್ಲೋನ್ ಪ್ರಭಾವ, 15ಜಿಲ್ಲೆಗಳಿಗೆ ವ್ಯಾಪಕ ಮಳೆ
ಬೆಂಗಳೂರು, ಡಿಸೆಂಬರ್ 09: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿ ಕರಾವಳಿ ಪ್ರದೇಶದತ್ತ ಸಾಗಿ ಬಂದ 'ಮಾಂಡೌಸ್' ಚಂಡಮಾರುತ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ ಎರಡು ದಿನ ರಾಜ್ಯದಲ್ಲಿ ಮಳೆ ಆರ್ಭಟಿಸಲಿದ್ದು, ಒಟ್ಟು 15ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೊಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಕರ್ನಾಟಕದ ಮೇಲೆ ಅದರಲ್ಲೂ ಪ್ರಮುಖವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇಲೆ 'ಮಾಂಡೌಸ್' ಪ್ರಭಾವ ಹೆಚ್ಚಾಗಿರಲಿದೆ. ಒಟ್ಟು ಮುಂದಿನ ಮೂರು ದಿನಗಳ ಪೈಕಿ ಡಿಸೆಂಬರ್ 11 ಮತ್ತು 12ರಂದು ಗುಡುಗು ಸಹಿತ ಧಾರಾಕಾರವಾಗಿ ಮಳೆ ಅಬ್ಬರಿಸಲಿದೆ. ಹೀಗಾಗಿ ಎರಡು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸೇರಿ ಒಟ್ಟು 15 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಭಾರಿ ಮಳೆ ನಿಗದಿತ ಈ 15ಜಿಲ್ಲೆಗಳಲ್ಲಿ ಸರಿಸುಮಾರು 11.5 ಸೆಂಟಿ ಮೀಟರ್‌ವರೆಗೆ ಮಳೆ ಬರುವ ಮುನ್ಸೂಚನೆ ಇದೆ. ಈ ಎರಡು ದಿನ ಹೊರತಾಗಿ ಉಳಿದ ದಿನಗಳಲ್ಲಿ ಅಷ್ಟಾಗಿ ಮಳೆ ಆಗದೇ ಹಗುರವಾಗಿ ಬರಬಹುದು ಎಂದು ಎನ್ನಲಾಗಿದೆ.

ಶುಕ್ರವಾರ ಕರಾವಳಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಭಾನುವಾರದ ವರೆಗೆ ಹಗುರುವಾಗಿ ಮಳೆ ಬರಲಿದೆ. ಎಲ್ಲಡೆ ಚಳಿ ಹಾಗೂ ಮೋಡ ಕವಿದ ಮಬ್ಬು ವಾತಾವರಣ ನಿರ್ಮಾಣವಾಗಲಿದೆ.
ರಾಜ್ಯದ ಗರಿಷ್ಠ ತಾಪಮಾನ ಹೊನ್ನಾವರ ಮತ್ತು ಕಾರವಾರದಲ್ಲಿ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಮಂಗಳೂರಿನಲ್ಲಿ 32.3 ಡಿಗ್ರಿ ಸೆಲ್ಸಿಯಸ್ ಮತ್ತು ಮೈಸೂರಿನಲ್ಲಿ 30ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇನ್ನೂ ರಾಜ್ಯದ ಕನಿಷ್ಠ ತಾಪಮಾನ 6.6ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಮಾಂಡೌಸ್' ಚಂಡಮಾರುತವು ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಯತ್ತ ಆಗಮಿಸಿದೆ. ಈ ಸೈಕ್ಲೋನ್ ಗಾಳಿ ವೇಗ ಗಂಟೆಗೆ 65ರಿಂದ 75ಕಿ.ಮೀ.ವರೆಗೆ ಇದೆ. ಕೆಲವೊಮ್ಮೆ ಇದರ ವೇಗ 80ಕಿ.ಮೀ.ವರೆಗೆ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications