ಚಾಮರಾಜನಗರಕ್ಕೆ 12 ಸಾವಿರ ಕೋಟಿ ಬಂಡವಾಳ : ಸಿಎಂ
ಬೆಂಗಳೂರು, ಮೇ.6 : ಮುಖ್ಯಮಂತ್ರಿಗಳ ಪಾಲಿಗೆ ಶಾಪಗ್ರಸ್ತ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಚಾಮರಾಜನಗರಕ್ಕೆ ಸದ್ಯ ಅದೃಷ್ಠ ಒಲಿದು ಬಂದಿದೆ. ಜಿಲ್ಲೆಗೆ 12 ಸಾವಿರ ಕೋಟಿ ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ರೋಡ್ ಶೋ ಫಲಶ್ರುತಿ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚಾಮರಾಜನಗರದಲ್ಲಿ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳು ಬಯಸಿದ್ದಾರೆ. ಒಟ್ಟು 12 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಅವರು ಒಪ್ಪಿಗೆ ನೀಡಿದ್ದು, ಇದಕ್ಕಾಗಿ 1600 ಎಕರೆ ಭೂಮಿ ಅಗತ್ಯವಿದೆ ಎಂದು ಹೇಳಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 394 ಎಕರೆ ಸರ್ಕಾರಿ ಭೂಮಿಯಿದೆ. ಉಳಿದ ಭೂಮಿಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ನೀರಾವರಿ, ಕಂದಾಯ, ಇಂಧನ ಸೇರಿದಂತೆ ಪ್ರಮುಖ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು. ಬಂಡವಾಳ ಹೂಡಲು ತಯಾರಾಗಿರುವವರು ನಂಜನಗೂಡಿನಿಂದ ಚಾಮರಾಜನಗರದ ತನಕ ನಾಲ್ಕು ಪಥದ ರಸ್ತೆ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ರೋಡ್ ಶೋ ನಡೆಸಿದ್ದರು : ಚಾಮರಾಜನಗರದ ಅಭಿವೃದ್ಧಿಗಾಗಿ ಬಂಡಾವಳ ಹೂಡುವಂತೆ ಸಿಎಂ ಸಿದ್ದರಾಮಯ್ಯ ಕೆಲವು ದಿನಗಳ ಹಿಂದೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ರೋಡ್ ಶೋ ನಡೆಸಿದ್ದರು. ಚಾಮರಾಜನಗರದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ, ಉದ್ಯಮಿಗಳ ಜೊತೆ ಮಾತುಕತೆ ನಡೆಸಿದ್ದರು.[ಚಾಮರಾಜನಗರ ಅಭಿವೃದ್ಧಿ ಮಾಡುವೆ : ಸಿಎಂ]
ಚಾಮರಾಜನರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ಅವರ ಜತೆಗೂಡಿ ಚರ್ಚಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ್ದರು. ಸದ್ಯ ಮೇ ತಿಂಗಳಿನಲ್ಲಿ 15 ಕೈಗಾರಿಕೆಗಳಿಗೆ ಬೇಕಾದ ಭೂಮಿಯನ್ನು ಗುರುತಿವುದು, ಭೂಮಿಗೆ ನೀಡಬೇಕಾದ ಪರಿಹಾರ ನಿಗದಿ ಮುಂತಾದ ಕಾರ್ಯಗಳು ನಡೆಯಲಿವೆ ಎಂದು ತಿಳಿದುಬಂದಿದೆ.












Click it and Unblock the Notifications