Santro Ravi : ಸ್ಯಾಂಟ್ರೊ ರವಿ ಬಂಧನಕ್ಕೆ 11 ವಿಶೇಷ ತಂಡ ರಚನೆ
ಬೆಂಗಳೂರು, ಜನವರಿ 09; ಕರ್ನಾಟಕದಲ್ಲಿ ಭಾರೀ ಚರ್ಚೆಯಲ್ಲಿರುವ ಹೆಸರು ಸ್ಯಾಂಟ್ರೊ ರವಿ. ಮೈಸೂರು ಪೊಲೀಸರು ಸ್ಯಾಂಟ್ರೊ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತನ ಬಂಧನಕ್ಕೆ 11 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಯಾಂಟ್ರೊ ರವಿ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸಲು ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ದೂರು ದಾಖಲಾದ ಬಳಿಕ ಸ್ಯಾಂಟ್ರೊ ರವಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆದಿದೆ. ಸ್ಯಾಂಟ್ರೊ ರವಿ ಬಂಧನದಿಂದ ತಪ್ಪಿಸಿಕೊಳ್ಳಲು ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಕೋರ್ಟ್ ಸೋಮವಾರ ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿತು ಮತ್ತು ಅರ್ಜಿ ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು. ಈ ನಡುವೆ ಮೈಸೂರು ಪೊಲೀಸರು ಸ್ಯಾಂಟ್ರೊ ರವಿ ಬಂಧನಕ್ಕೆ 11 ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದಾನೆ. ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ಹೊರ ರಾಜ್ಯದಲ್ಲಿ ಶೋಧ; ಸ್ಯಾಂಟ್ರೊ ರವಿ ಕರ್ನಾಟಕ ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರ ತಂಡ ಹೊರ ರಾಜ್ಯಗಳಲ್ಲಿ ಸಹ ಹುಡುಕಾಟ ನಡೆಸುತ್ತಿದೆ.
ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸಹ ಪೊಲೀಸರ ತಂಡ ಹುಡುಕಾಟ ಮುಂದುವರೆಸಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ನೇತೃತ್ವದಲ್ಲಿ ಪೊಲೀಸರ ತಂಡಗಳು ಹುಡುಕಾಟ ನಡೆಸಿವೆ.
ಟ್ವೀಟ್‌ನಲ್ಲಿ ಕುಟುಕಿದ ಕಾಂಗ್ರೆಸ್; ಸ್ಯಾಂಟ್ರೊ ರವಿ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುತ್ತಿದೆ. ಸೋಮವಾರ ತನ್ನ ಟ್ವೀಟ್‌ನಲ್ಲಿ 'ಸ್ಯಾಂಟ್ರೊ ರವಿಯನ್ನು ಪೊಲೀಸರು ಹುಡುಕುತ್ತಿದ್ದಾರಂತೆ!. ಗೃಹ ಇಲಾಖೆಯ ವರ್ಗಾವಣೆಯ ಹೊಣೆ ಹೊತ್ತವನು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದು ಪರಮ ಹಾಸ್ಯವಲ್ಲವೇ!' ಎಂದು ಕಾಂಗ್ರೆಸ್ ಕೇಳಿದೆ.
'ಪೊಲೀಸರು ಆತನನ್ನು ಒಮ್ಮೆ ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ!. ಸಿಡಿ ಸರ್ಕಾರದ ಸಂಪೂರ್ಣ ಜಾತಕ ಆತನ ಬಳಿ ಇರುವಾಗ ಆತನ ತನಿಖೆ ಸಾಧ್ಯವೇ?' ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.












Click it and Unblock the Notifications