ಕಾಂಗ್ರೆಸ್ ಸರ್ಕಾರದ ಪ್ರಚಾರಕ್ಕಾಗಿ 1076 ಕೋಟಿ ರೂಪಾಯಿ ಖರ್ಚು!
ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷವು ಪ್ರಚಾರಕ್ಕಾಗಿ ಬಿಜೆಪಿ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ ಎಂದು ದೂರುತ್ತಿತ್ತು. ಇದೀಗ ಕಾಂಗ್ರೆಸ್ ಪಕ್ಷದ ಸರದಿ ಎನ್ನುವಂತಿದೆ. ಕಾಂಗ್ರೆಸ್ ಪಕ್ಷವು ಪ್ರಚಾರ ಕಾರ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದೆ ಎನ್ನುವ ವಿಷಯವು ಇದೀಗ ಬಹಿರಂಗವಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷವು ಈ ವಿಚಾರದಲ್ಲಿ ಭಾರೀ ಮುಜುಗರಕ್ಕೆ ಒಳಗಾಗಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ" ಎನ್ನುವಂತಾಗಿದೆ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದ ಭಂಡ ಬಾಳು. ನೀರುಗಂಟಿಗಳಿಗೆ, ಗ್ರಂಥಪಾಲಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡಲು ದುಡ್ಡಿಲ್ಲ. ಹಿಂದುಳಿದ ಜಿಲ್ಲೆಗಳಲ್ಲಿನ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್, ಶೌಚಾಲಯ ದುರಸ್ತಿ, ಹೆಚ್ಚುವರಿ ವಿದ್ಯಾರ್ಥಿ ನಿಲಯಕ್ಕೆ ಹಣವಿಲ್ಲ ಎಂದು 'ಕೈ' ಚೆಲ್ಲುವ ಕಾಂಗ್ರೆಸ್ ಸರ್ಕಾರ ಪ್ರಚಾರಕ್ಕೆ ಮಾತ್ರ ಖಜಾನೆಯಿಂದ 1076 ಕೋಟಿ ರೂ. ಬರಿದು ಮಾಡಿದೆ.

ವಿಶೇಷವೆಂದರೇ ಕರ್ನಾಟಕದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಸರಣ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ ಸಹ ಈ ಪತ್ರಿಕೆಗೆ 2023-24 , 2024-25 ಸಾಲಿನಲ್ಲಿ ಹಲವು ಬಾರಿ ಜಾಹೀರಾತು ನೀಡಿದೆ. ಆದರೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾತು ವೆಚ್ಚ ಪಾವತಿಸಿರುವ ಮೊತ್ತದ ವಿವರಗಳನ್ನು ಬಹಿರಂಗಪಡಿಸಿಲ್ಲ.
ನ್ಯಾಷನಲ್ ಹೆರಾಲ್ಡ್'ನ ಸುಮಾರು 2 ಸಾವಿರ ಕೋಟಿ ಮೌಲ್ಯದ ಆಸ್ತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಪ್ರಮುಖ ಆರೋಪಿಗಳಾಗಿದ್ದು, ಇಡಿ ತನಿಖೆ ಎದುರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.
ರಾಜ್ಯದ ಜನರ ತೆರಿಗೆ ದುಡ್ಡಿನಲ್ಲಿ ಕಾಂಗ್ರೆಸ್ಸಿಗರು ಭರ್ಜರಿ ಜಾತ್ರೆ ನಡೆಸುತ್ತಿದ್ದಾರೆ. ಸರ್ಕಾರಿ ನೌಕರರು, ಹೊರ ಗುತ್ತಿಗೆ ನೌಕರರು ಹಲವು ತಿಂಗಳಿಂದ ಸಂಬಳ ಸಿಗದೆ ಕುಟುಂಬ ನಿರ್ವಹಣೆ, ಸಾಲ ಪಾವತಿ, ಮಕ್ಕಳ ವಿದ್ಯಾಭ್ಯಾಸ ಇನ್ನಿತರ ಜವಾಬ್ದಾರಿ ಸೇರಿದಂತೆ ತುತ್ತು ಅನ್ನಕ್ಕೂ ಹಣವಿಲ್ಲದೆ ಪರದಾಡುತ್ತಾ ಮರ್ಯಾದೆಗೆ ಅಂಜಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ..ಜನ ಪರ ಆಡಳಿತ ನೀಡುವಲ್ಲಿ ವಿಫಲವಾಗಿರುವ ದುಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಜೆಡಿಎಸ್ ಪಕ್ಷ ಹೇಳಿದೆ.












Click it and Unblock the Notifications