ಸೋಮವಾರದಿಂದ ಅಧಿವೇಶನ : ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷ ಸಜ್ಜು
ಬೆಂಗಳೂರು, ನವೆಂಬರ್ 14 : ಸೋಮವಾರದಿಂದ ಹತ್ತು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಒಟ್ಟು ಮೂರು ವಿಧೇಯಕಗಳಿಗೆ ಅಧಿವೇಶನದಲ್ಲಿ ಅಂಗೀಕಾರ ದೊರೆಯಬೇಕಾಗಿದೆ. ಟಿಪ್ಪು ಜಯಂತಿ, ಮಡಿಕೇರಿ ಗಲಭೆ ಮುಂತಾದ ವಿಚಾರಗಳ ಕುರಿತು ಬಿಸಿ-ಬಿಸಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಅಧಿವೇಶನದ ಕುರಿತು ಮಾಹಿತಿ ನೀಡಿದರು. ನವೆಂಬರ್ 16ರಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು. ['ಅಂಬರೀಶ್ ಹೀರೋ ಆಗಿದ್ದಕ್ಕೆ ಸಚಿವರನ್ನಾಗಿ ಮಾಡಿದ್ದು']

ವಿಧೇಯಕಗಳು : ಕಳೆದ ಅಧಿವೇಶನದಲ್ಲಿ ಮಂಡನೆಯಾಗಿರುವ ಕರ್ನಾಟಕ ಕಾಕಂಬಿ ನಿಯಂತ್ರಣ ವಿಧೇಯಕ 2014, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ತಿದ್ದುಪಡಿ ವಿಧೇಯಕ 2015 ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವಿಧೇಯಕ 2015 ಅಂಗೀಕಾರಕ್ಕೆ ಬಾಕಿ ಇವೆ ಎಂದರು. [ರಾಮಯ್ಯ, ಶಂಕ್ರಪ್ಪ ಸೇರಿ ಅನ್ನದಾನಿಯನ್ನು ಕೊಂದ ಕಥೆ]
ನವೆಂಬರ್ 16ರ ಸೋಮವಾರ ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಸದನವನ್ನು ಮುಂದೂಡಲಾಗುವುದು. ಈ ಅಧಿವೇಶನಕ್ಕೆ 2,681 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 75 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 995 ಚುಕ್ಕೆ ರಹಿತ ಪ್ರಶ್ನೆಗಳಾಗಿರುತ್ತವೆ. ಉಳಿದಂತೆ 15 ಗಮನ ಸೆಳೆಯುವ ಸೂಚನೆಗಳು ಬರಲಿದ್ದು, ನಿಯಮ 351 ರಡಿ 12 ಸೂಚನೆಗಳು ಸ್ವೀಕೃತಗೊಂಡಿವೆ ಎಂದು ಮಾಹಿತಿ ನೀಡಿದರು.
60 ದಿನ ಅಧಿವೇಶನ ನಡೆಯಬೇಕು : ಪ್ರತಿವರ್ಷ ಕನಿಷ್ಠ 60 ದಿನ ಅಧಿವೇಶನ ನಡೆಯಬೇಕು. ಈ ಅಧಿವೇಶನದ 10 ದಿನಗಳೂ ಸೇರಿದರೆ ಈ ಬಾರಿ ಒಟ್ಟು 58 ದಿನಗಳು ಸದನ ನಡೆಸಿದಂತಾಗುತ್ತದೆ. ಎಲ್ಲಾ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ಉತ್ತಮ ಸಲಹೆಗಳನ್ನು ನೀಡಬೇಕು ಎಂದು ಕಾಗೋಡು ತಿಮ್ಮಪ್ಪ ಮನವಿ ಮಾಡಿದರು.
ವಿಧಾನಪರಿಷತ್ : ವಿಧಾನ ಪರಿಷತ್ ಅಧಿವೇಶನವೂ ನವೆಂಬರ್ 16 ರಿಂದ ನವೆಂಬರ್ 27 ರವರೆಗೆ ನಡೆಯಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ. 13 ವರ್ಷಗಳ ನಂತರ ಈ ಬಾರಿಯ ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಸಿದಂತಾಗುತ್ತದೆ ಎಂದು ಹೇಳಿದರುವ ಅವರು, ನವೆಂಬರ್ 16 ರಿಂದ ನಡೆಯುವ 10 ದಿನಗಳನ್ನು ಸೇರಿಸಿದಲ್ಲಿ ಈ ವರ್ಷ ಒಟ್ಟು 60 ದಿನ ಅಧಿವೇಶನ ನಡೆದಂತಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications