Kampli Elections : ಅಧಿಕಾರಕ್ಕಾಗಿ ಬಿಜೆಪಿ ತಂತ್ರ, ಕಾಂಗ್ರೆಸ್ ಪ್ರತಿ ತಂತ್ರ
ಬಳ್ಳಾರಿ, ಮಾರ್ಚ್ 24: ಕಂಪ್ಲಿ ಬಳ್ಳಾರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಗಂಡುಗಲಿ ಕುಮಾರರಾಮನ ವೀರಭೂಮಿ. 14ನೇ ಶತಮಾನದಲ್ಲಿ ಇದ್ದಂತಹ ಶಕ್ತಿಶಾಲಿ ಹಿಂದೂ ಸಾಮ್ರಾಜ್ಯದ ಹೆಸರೇ ಕಂಪ್ಲಿಯಾಗಿದ್ದು, ಕಂಪ್ಲಿ ಪಟ್ಟಣ ನೊಳಂಬ ಪಲ್ಲವರ ರಾಜಧಾನಿಯಾಗಿತ್ತು ಎನ್ನಲಾಗಿದೆ. ಐತಿಹಾಸಿಕವಾಗಿ ಶ್ರೀಮಂತ ಇತಿಹಾಸ ಹೊಂದಿರುವ ಕಂಪ್ಲಿ ಇಂದು ರಾಜಕೀಯವಾಗಿಯೂ ತನ್ನದೇ ಆದ ಮಹತ್ವವನ್ನ ಹೊಂದಿದೆ.
ಕಂಪ್ಲಿಯಲ್ಲಿ ಇತಿಹಾಸ ಪ್ರಸಿದ್ಧ ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನವಿದೆ. ಗಂಡುಗಲಿ ಕುಮಾರ ರಾಮನ ಆರಾಧ್ಯದೇವ ಸೋಮೇಶ್ವರ ದೇವಾಲಯ, ಹೇಮಕೂಟ ಬೆಟ್ಟದ ಮೇಲಿರುವ ಶಿವನ ದೇವಾಲಯ, ತುಂಗಭದ್ರಾ ನದಿ, ತುಂಗಭದ್ರಾ ಜಲಾಶಯ ಹೀಗೆ ಕಂಪ್ಲಿಯಲ್ಲಿ ಹತ್ತಾರು ಪ್ರವಾಸಿ ತಾಣವಿದೆ.

ಕಂಪ್ಲಿ ಕ್ಷೇತ್ರದ ಜನರ ಮೂಲ ಕಸುಬು ನೇಯ್ಗೆ ಆಗಿದೆ. ಇಲ್ಲಿನ ಬಹುತೇಕ ಜನ ನೇಯ್ಗೆಯ ಮೂಲಕ ಜೀವನ ನಡೆಸುತ್ತಿದ್ದಾರೆ. ತುಂಗಭದ್ರಾ ನದಿ ತೀರದ ರೈತರು ಕಬ್ಬನ್ನ ಹೆಚ್ಚಾಗಿ ಬೆಳೆಯುವುದರಿಂದ ಕರ್ನಾಟಕದಲ್ಲಿ ಮೊಟ್ಟ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕಂಪ್ಲಿಯಲ್ಲಿ ಸ್ಥಾಪನೆ ಮಾಡಲಾಗಿತ್ತು. ಸದ್ಯ ಈ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು, ಈ ಕ್ಷೇತ್ರದ ಜನರ ಬಹುದೊಡ್ಡ ಬೇಡಿಕೆಯೇ ಸಕ್ಕರೆ ಕಾರ್ಖಾನೆ ಪುನರಾರಂಭವಾಗಿದೆ.
ಕಂಪ್ಲಿ ವಿಧಾನಸಭಾ ಕ್ಷೇತ್ರದ ರಾಜಕೀಯ ಹಿನ್ನೆಲೆ
ಐತಿಹಾಸಿಕವಾಗಿ ಮಹತ್ವ ಪಡೆದಿರುವ ಕಂಪ್ಲಿಯ ರಾಜಕೀಯ ವಿಶ್ಲೇಷಣೆ ಇಲ್ಲಿದೆ. ಈ ಕ್ಷೇತ್ರದ ಮೊಟ್ಟ ಮೊದಲ ಶಾಸಕ ಟಿ.ಎಚ್.ಸುರೇಶ್ ಬಾಬು. 2008ರಲ್ಲಿ ಬಿಜೆಪಿಯಿಂದ ಸ್ಫರ್ಧಿಸಿದ್ದ ಟಿ.ಎಚ್ ಸುರೇಶ್ ಬಾಬು 61,388 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಣ್ಣ ಹನುಮಕ್ಕ ಸುಮಾರು 22,336 ಮತಗಳ ಅಂತರದಲ್ಲಿ ಸೋತಿದ್ದರು.

ಬಳಿಕ ಟಿ.ಎಚ್ ಸುರೇಶ್ ಬಾಬು2013 ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಆರ್‌ಸಿಪಿಯಿಂದ ಸ್ಪರ್ಧಿಸಿ ಜೆಎನ್ ಗಣೇಶ್ ವಿರುದ್ಧ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲೇ ತಮ್ಮದೇ ಹಿಡಿತ ಹೊಂದಿ ಸತತ ಗೆಲುವು ಸಾಧಿಸುತ್ತಿದ್ದ ಸುರೇಶ್ ಬಾಬು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ಜೆಎನ್ ಗಣೇಶ್ 2018ರ ಚುನಾವಣೆಯಲ್ಲಿ ಚಕ್ರವ್ಯೂಹ ರಚಿಸಿ, 5,555 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಇನ್ನು ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಹಾಲಿ ಶಾಸಕ ಜೆಎನ್ ಗಣೇಶ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಇನ್ನೇನು ಅಧಿಕೃತ ಘೋಷಣೆ ಒಂದೇ ಬಾಕಿ ಇದೆ. ಇತ್ತ ಕಳೆದ ಬಾರಿಯ ಸೋಲಿನ ಪ್ರತಿಕಾರ ತೀರಿಸಿಕೊಳ್ಳಲು ಬಿಜೆಪಿಯಿಂದ ಸುರೇಶ್ ಬಾಬು ಬರ್ಜರಿ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಹೆಸರಿಗಷ್ಟೇ ಇದ್ದು, ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿಯ ಪೈಪೋಟಿ ನಡೆಯಲಿದೆ.

ಕಂಪ್ಲಿ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಕಂಪ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಪಕ್ಕದಲ್ಲೇ ತುಂಗಭದ್ರಾ ನದಿ ಹರಿದರೂ ಕಂಪ್ಲಿನ ಜನತೆ ಪ್ಲೋರೈಡ್ಯುಕ್ತ ನೀರು ಕುಡಿಯುತ್ತಿರುವುದು ವಿಪರ್ಯಾಸವೇ ಸರಿ. ಕೆಲವೊಂದು ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಕೆರೆಗಳ ನಿರ್ಮಾಣವಾಗಿದ್ದು ಸಾರ್ವಜನಿಕ ಬಳಕೆಗೆ ಯೋಗ್ಯವಾಗಿಲ್ಲ. ಗೋನಾಳು, ಚಿಕ್ಕಜಾಯಿಗನೂರು, ಜವುಕು, ರೆಗುಲೇಟರ್ ಕ್ಯಾಂಪ್, ಉಪ್ಪಾರಹಳ್ಳಿ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಹೀಗೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುದೊಡ್ಡ ಮಟ್ಟದಾಗಿದ್ದು, ಯಾರೇ ಚುನಾವಣೆಯಲ್ಲಿ ಗೆದ್ದರೂ ತಮಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎನ್ನುವುದು ಕಂಪ್ಲಿ ಜನರ ಬೇಡಿಕೆ.
ಕಂಪ್ಲಿ ಕ್ಷೇತ್ರದ ಮತದಾರರ ವಿವರ
ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1,55,000ಕ್ಕೂ ಹೆಚ್ಚು ಮತಗಳಿವೆ. ಅದರಲ್ಲಿ 60 ಸಾವಿರಕ್ಕೂ ಹೆಚ್ಚು ವಾಲ್ಮಿಕಿ ಸಮಾಜದ ಮತಗಳಿದ್ದು, 50 ಸಾವಿರ ಎಸ್ಸಿ ಮತದಾರರಿದ್ದಾರೆ. ಉಳಿದಂತೆ 40 ಸಾವಿರ ಕುರುಬರು, 30 ಸಾವಿರ ಲಿಂಗಾಯತರು ಹಾಗೂ 20 ಸಾವಿರ ಮುಸಲ್ಮಾನರ ಮತಗಳಿವೆ ಎನ್ನುವುದು 2018ರಲ್ಲಿ ಚುನಾವಣಾ ಆಯೋಗ ನೀಡಿರುವ ಮಾಹಿತಿಯಾಗಿದೆ.
2018 ಕಂಪ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ
2018ರ ಕಂಪ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಎನ್ ಗಣೇಶ್ ಕಣಕ್ಕಿಳಿದಿದ್ದು, ಒಟ್ಟು 80,592 ಮತಗಳನ್ನು ಪಡೆದಿದ್ದು. ಇನ್ನು ಬಿಜೆಪಿ ಅಭ್ಯರ್ಥಿಯಾಗಿದ್ದ ಟಿಎಚ್ ಸುರೇಶ್ 75,037 ಮತಗಳನ್ನು ಪಡೆದಿದ್ದು, 5,555 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2008 | ಟಿಎಚ್ ಸುರೇಶ್ ಬಾಬು ಬಿಜೆಪಿ | 61,388 | ಸಣ್ಣ ಹನುಮಕ್ಕ ಕಾಂಗ್ರೆಸ್ | 39,052 |
| 2013 | ಟಿ ಎಚ್ ಸುರೇಶ್ ಬಾಬು ಬಿಎಸ್ಆರ್‌ಸಿಪಿ | 70,858 | ಜೆ ಎನ್ ಗಣೇಶ್ ಪಕ್ಷೇತರ | 36,462 |
| 2018 | ಜೆ ಎನ್ ಗಣೇಶ್ ಕಾಂಗ್ರೆಸ್ | 80,592 | ಟಿಎಚ್ ಸುರೇಶ್ ಬಿಜೆಪಿ | 75,037 |












Click it and Unblock the Notifications