ಸಂಚಾರ ಸಮಯದಲ್ಲಿ ಜೀರೋ ಟ್ರಾಫಿಕ್ ಬೇಡ; ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ, ಜುಲೈ 10; ಸಚಿವರ ಹಾಗೂ ಬೆಂಗಾವಲು ಪಡೆಯ ಸಂಚಾರಕ್ಕಾಗಿ ಯಾವುದೇ ರೀತಿಯಲ್ಲೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಅಥವಾ ನಿರ್ಬಂಧ ಮಾಡದಂತೆ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಚಿವರಾದ ಶರಣಪ್ರಕಾಶ್ ಪಾಟೀಲ್ ಜೊತೆ ಕಲಬುರಗಿಯ ಎಸ್‌ಪಿ, ಕಮೀಷನರ್ ಹಾಗೂ ಡಿಸಿಪಿ ಜೊತೆ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಸಚಿವರ ಹಾಗೂ ಬೆಂಗಾವಲು ಪಡೆಯ ಸಂಚಾರಕ್ಕಾಗಿ ಯಾವುದೇ ರೀತಿಯಲ್ಲೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಅಥವಾ ನಿರ್ಬಂಧ ಮಾಡದಂತೆ ಸೂಚನೆ ನೀಡಿರು. ಸಚಿವರ ಅಥವಾ ಯಾವುದೇ ಜನಪ್ರತಿನಿಧಿಗಳ ಓಡಾಟ ಸಾರ್ವಜನಿಕರ ಓಡಾಟಕ್ಕೆ ಅನಗತ್ಯ ವಿಳಂಬ ಉಂಟು ಮಾಡುವುದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ಜೀರೋ ಟ್ರಾಫಿಕ್/ ತಡೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಪೊಲೀಸ್ ಇಲಾಖೆಗೆ ಹಲವು ಸೂಚನೆ; ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಲು ಪೊಲೀಸರ ಜೊತೆ ಈಗಾಗಲೇ ಸಭೆಗಳನ್ನು ಮಾಡಿದ್ದಾರೆ. ಹಲವು ಸೂಚನೆಗಳನ್ನು ಅವರಿಗೆ ನೀಡಿದ್ದಾರೆ.
"ಇನ್ನು ಮುಂದೆ ಅಕ್ರಮ ಮರಳು, ಕಲ್ಲು ಗಣಗಾರಿಕೆ ಕುರಿತು ಯಾವುದೇ ದೂರು ಬಂದಲ್ಲಿ ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಸಚಿವರು, ಅಕ್ರಮ ಮರಳು ಮಾಫಿಯಾಗೆ ಬಲಿಯಾದ ನೆಲೋಗಿ ಪೊಲೀಸ್ ಠಾಣೆಯ ಮಯೂರ್ ಚವ್ಹಾಣ್ ವಿಷಯ ಪ್ರಸ್ತಾಪಿಸಿದ್ದರು. "ಅವರ ಕುಟಂಬದ ಆಧಾರವೇ ಇಲ್ಲದಂತಾಗಿದೆ. ಇಂದು ಅವರ ಮನೆಗೆ ನಾನು ಹೋಗಿ ಬಂದಿದ್ದೇನೆ. ಒಮ್ಮೆ ಆ ಮನೆಗೆ ಭೇಟಿ ಕೊಟ್ಟು ಬನ್ನಿ, ಆ ಕುಟುಂಬದ ನೋವು ಏನೆಂದು ತಿಳಿಯುತ್ತದೆ" ಎಂದು ಹೇಳಿದ್ದರು.
"ನಿಮ್ಮ ಇಲಾಖೆಯ ಓರ್ವ ಸಿಬ್ಬಂದಿ ಮಾಫಿಯಾಗೆ ಬಲಿಯಾಗಿದ್ದಾನೆ. ರಾಜಕೀಯ ನಾಯಕರು, ಪೊಲೀಸ್ ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳ ಶ್ರೀರಕ್ಷೆ ಇಲ್ಲದೇ ಇದೆಲ್ಲ ನಡೆಯಲ್ಲ. ಇನ್ನು ಮುಂದೆ ಇದಕ್ಕೆ ಕಡಿವಾಣ ಹಾಕಲೇಬೇಕು" ಎಂದು ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳಿಗೆ ಸಚಿವರು ಎಚ್ಚರಿಸಿದ್ದರು.
"ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮತ್ತು ಮರಳು ಸಂಗ್ರಹಣೆ ಮತ್ತು ಮಾರಾಟ, ಕ್ರಿಕೆಟ್ ಬೆಟ್ಟಿಂಗ್, ಗ್ಯಾಂಬ್ಲಿಂಗ್, ಚೈನ್ ಸ್ನ್ಯಾಚಿಂಗ್, ಕಳ್ಳತನ, ಗಾಂಜಾ ಮಾರಾಟ, ಸ್ಮಗ್ಲಿಂಗ್ ಇವೆಲ್ಲಕ್ಕೂ ಕಡಿವಾಣ ಹಾಕಬೇಕು. ಠಾಣೆಗೆ ಬರುವ ಸಾರ್ವಜನಿರೊಂದಿಗೆ ಸಂಯಮದಿಂದ ವರ್ತಿಸಬೇಕು" ಎಂದು ಸೂಚನೆ ಕೊಟ್ಟಿದ್ದರು.
"ರೌಡಿಗಳು ಪೊಲೀಸರನ್ನು ನೋಡಿ ಹೆದರಬೇಕು. ಅದರ ಬದಲು ರೌಡಿಗಳ ಜೊತೆ ಪೊಲೀಸ್ ಅಧಿಕಾರಿಗಳು ಹುಟ್ಟುಹಬ್ಬ ಆಚರಿಸುವ ಕೆಟ್ಟು ಗೀಳು ಹುಟ್ಟುಕೊಂಡಿದೆ. ಈ ಮೂಲಕ ಸಮಾಜಕ್ಕೆ ಪೊಲೀಸ್ ಇಲಾಖೆಯಿಂದ ಯಾವ ರೀತಿಯ ಸಂದೇಶ ಹೋಗುತ್ತದೆ? ಎಂಬುದು ನೀವು ಬಲ್ಲಿರಾ?" ಎಂದು ಸಚಿವರು ಪ್ರಶ್ನಿಸಿದ್ದರು.
"ಸಚಿವರು, ರೌಡಿಗಳು, ಸಮಾಜ ಘಾತುಕರು ಖಾಕಿ ಕಂಡರೆ ಭಯ ಬರುವಂತೆ ನಿಮ್ಮ ಕೆಲಸದಲ್ಲಿ ಬದಲಾವಣೆ ತನ್ನಿ. ಇಲ್ಲ ಜಾಗ ಖಾಲಿ ಮಾಡಿ. ತಮ್ಮ ಹಾಗೂ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೆಸರಿನಲ್ಲಿ ಠಾಣೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದು, ಈ ರೀತಿಯ ವಸೂಲಿಗೆ ಇಳಿದಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದರು.
ಕಳ್ಳತನಕ್ಕೆ ಕಡಿವಾಣ ಹಾಕಬೇಕು; ಸಚಿವ ಪ್ರಿಯಾಂಕ್ ಖರ್ಗೆ, "ಕಲಬುರಗಿ ನಗರದಲ್ಲಿ ಹಾಡುಹಗಲೇ ಕೊಲೆ ನಡೆಯುತ್ತಿವೆ. ಇತ್ತೀಚೆಗೆ ಹಾಗರಗಾ ಕ್ರಾಸ್, ಬಸ್ ನಿಲ್ದಾಣದಲ್ಲಿ ಕೊಲೆ ಘಟನೆಗಳು ನಡೆದಿವೆ. ಜನ ಭಯಭೀತರಾಗಿದ್ದಾರೆ. ಇಂತಹ ಪುಂಡ-ಪೋಕರಿಗಳನ್ನು ಹೆಡೆ ಮುರಿ ಕಟ್ಟಿ ಕಂಬಿ ಒಳಗೆ ಹಾಕಬೇಕಾದ ಕೆಲಸ ಮೊದಲು ಮಾಡಬೇಕು. ನಗರದಲ್ಲಿ ಸರಗಳ್ಳತನ, ಮನೆ ಕಳ್ಳತನಕ್ಕೆ ಕಡಿವಾಣ ಹಾಕಬೇಕು" ಎಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದರು.
"ಗಾಣಗಾಪೂರಕ್ಕೆ ಬರುವ ಭಕ್ತಾದಿಗಳಿಗೆ ರಸ್ತೆ ಮಾರ್ಗದಲ್ಲಿ ಹಣ, ಚಿನ್ನ ದರೋಡೆ ಮಾಡಲಾಗುತ್ತಿದೆ ಎಂಬ ದೂರು ಬಂದಿವೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ಗಮನಹರಿಸಬೇಕು" ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನ್ ಕುಮಾರ್ ಮತ್ತು ಎಸ್‌ಪಿ ಇಶಾ ಪಂತ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ಕೊಟ್ಟಿದ್ದರು.
"ಕಲಬುರಗಿ ಜಿಲ್ಲೆಯಲ್ಲಿ ಯುವತಿಯರು, ಹೆಣ್ಣು ಮಕ್ಕಳ ಕಾಣೆಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಅವರೆಲ್ಲ ಎಲ್ಲಿ ಹೋದರು, ಏನಾಯಿತು?. ಪೊಲೀಸ್ ಇಲಾಖೆ ಬಳಿ ಮಾಹಿತಿ ಇದೆಯೇ?. ಪ್ರತಿಯೊಂದು ಪ್ರಕರಣದ ಸರಿಯಾದ ತನಿಖೆ ಆಗಬೇಕು" ಎಂದು ಸೂಚಿಸಿದ್ದರು.












Click it and Unblock the Notifications