ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನದ ಕನಸು ಫೆ.10ಕ್ಕೆ ನನಸು
ಕಲಬುರಗಿ, ಫೆಬ್ರವರಿ 05: ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನದ ಕನಸು ಫೆಬ್ರವರಿ 10ರಂದು ನನಸಾಗಲಿದೆ. ಕಲಬುರಗಿಯಲ್ಲಿ 11O ಹಾಸಿಗೆಯ 'ಟ್ರಾಮ ಸೆಂಟರ್' ಲೋಕಾರ್ಪಣೆಗೊಳ್ಳಲಿದೆ. ಅಪಘಾತ, ದೈಹಿಕ ಗಾಯ, ತುರ್ತು ಚಿಕಿತ್ಸಾ ಘಟಕಗಳ ಕೇಂದ್ರವಿದಾಗಿದ್ದು, ಜನರಿಗೆ ಅನುಕೂಲವಾಗಲಿದೆ.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ. ಶರಣಪ್ರಕಾಶ ಪಾಟೀಲ
ಕಲಬುರಗಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಟ್ರಾಮಾ ಸೆಂಟರ್‌ಗೆ ಭೇಟಿ ನೀಡಿ, ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ಸಭೆಯನ್ನು ಸಹ ನಡೆಸಿದರು.

110 ಹಾಸಿಗೆಯುಳ್ಳ ಸುಸಜ್ಜಿತ ಕಟ್ಟಡ ಇದಾಗಿದ್ದು, ಅತ್ಯಾಧುನಿಕ ಉಪಕರಣಗಳು, ಸಲಕರಣೆಗಳನ್ನು ಒಳಗೊಂಡಿದೆ. ಬಿಪಿಎಲ್ ಕುಟುಂಬದಾರರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಇಲ್ಲಿ ದೊರೆಯಲಿದೆ. ಫೆಬ್ರವರಿ 10ರಂದು ಟ್ರಾಮಾ ಸೆಂಟರ್ ಉದ್ಘಾಟನೆಗೊಳ್ಳಲಿದೆ.
ಬಹುದಿನದ ಕನಸು: ಅಪಘಾತ, ದೈಹಿಕ ಗಾಯ, ತುರ್ತು ಚಿಕಿತ್ಸಾ ಘಟಕಗಳ ಕೇಂದ್ರವಾ ಟ್ರಾಮ ಸೆಂಟರ್ ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನದ ಕನಸು. ಈ ಭಾಗದ ಜನರಿಗೆ ವಿಶೇಷವಾಗಿ ಬಡಜನರಿಗಾಗಿ ಕಲಬುರಗಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುಸಜ್ಜಿತವಾದ 11O ಹಾಸಿಗೆಯುಳ್ಳ ಟ್ರಾಮ ಸೆಂಟರ್ ನಿರ್ಮಾಣ ಮಾಡಲಾಗಿದೆ.
ಈ ಟ್ರಾಮಾ ಸೆಂಟರ್‌ನಲ್ಲಿ ನರರೋಗ, ಕೀಲು ಮೂಳೆ ವಿಭಾಗ, ತಲಾ 30 ಹಾಸಿಗೆಯ ರೆಡ್, ಯೆಲ್ಲೋ, ಮತ್ತು ಗ್ರೀನ್ ಝೋನ್ ಪ್ರತ್ಯೇಕ ವಾರ್ಡ್‌ಗಳನ್ನಾಗಿ ವಿಂಗಡಿಸಲಾಗಿದೆ. ಒಂದು 124 ಸಾಮರ್ಥ್ಯದ ಸಿಟಿಸ್ಕ್ಯಾನ್, 1.5 ಎಂಆರ್‌ಐ, ಸುಸಜ್ಜಿತ ಐಸಿಯು ಘಟಕ, 5 ಅಂಬುಲೆನ್ಸ್ ಸೇರಿದಂತೆ ಹಲವು ಸೌಲಭ್ಯಗಳು ಇಲ್ಲಿವೆ.
ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಾಳುಗಳಿಗೆ ಬೇಗ ಚಿಕಿತ್ಸೆ ದೊರಕಿದಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಆದ್ದರಿಂದ ಕಲಬುರಗಿಯಲ್ಲಿ ಟ್ರಾಮಾ ಸೆಂಟರ್ ಸ್ಥಾಪಿಸಿ ವೈದ್ಯಕೀಯ ಉಪಕರಣಕ್ಕೆ 20 ಕೋಟಿ ರೂ. ಅನ್ನು ಈ ಹಿಂದೆ ಮೀಸಲಿಡಲಾಗಿತ್ತು.
ಆದರೆ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗೆ ಚುರುಕು ನೀಡಲಾಯಿತು. ಫೆಬ್ರವರಿ 10ರಂದು ಕಲಬುರಗಿ ಟ್ರಾಮಾ ಸೆಂಟರ್ ರೋಗಿಗಳ ಸೇವೆಗೆ ಲಭ್ಯವಾಗಲಿದೆ.
2013ರ ಚುನಾವಣೆ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ 2017ರ ಡಿಸೆಂಬರ್‌ನಲ್ಲಿ ಟ್ರಾಮಾ ಸೆಂಟರ್ ಲೋಕಾರ್ಪಣೆಯಾಗಲಿದೆ ಎಂದು ಹೇಳಿತ್ತು. ವಾಹನಗಳ ಅಪಘಾತದಿಂದ ತೊಂದರೆಗೆ ಒಳಪಡುವವರಿಗೆ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಅನುವಾಗುವಂತೆ ಟ್ರಾಮಾ ಸೆಂಟರ್ ಪ್ರಾರಂಭಿಸಲು ಉದ್ದೇಶಿಸಲಾಗಿತ್ತು. ಆದರೆ ಅದು ಈಗ ಲೋಕಾರ್ಪಣೆಯಾಗುತ್ತಿದೆ.
ಕರ್ನಾಟಕ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಲು ವಿಶೇಷ ಗಮನ ನೀಡಿದೆ. ಈಗಾಗಲೇ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಮತ್ತು ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗಿದೆ. ಜಯದೇವ ಆಸ್ಪತ್ರೆಯ ಸ್ವಂತ ಕಟ್ಟಡ ಶೀಘ್ರವೇ ಲೋಕಾರ್ಪಣೆಯಾಗಲಿದೆ.
ಕಲಬುರಗಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ 6.8 ಎಕರೆ ಪ್ರದೇಶದಲ್ಲಿ 183 ಕೋಟಿ ರೂ. ವೆಚ್ಚದೊಂದಿಗೆ ನಿರ್ಮಾಣವಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖಾ ಆಸ್ಪತ್ರೆಯನ್ನು ಶೀಘ್ರವೇ ಉದ್ಘಾಟನೆಯಾಗಲಿದೆ.
ಕೇವಲ ಆಸ್ಪತ್ರೆ ಕಟ್ಟಡ ಮಾತ್ರವಲ್ಲ ಸುಮಾರು 56 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಆಸ್ಪತ್ರೆ ತನ್ನ ಸೇವೆ ಆರಂಭಿಸಲಿದೆ. ನೂತನ ಆಸ್ಪತ್ರೆಗೆ ತಕ್ಕಂತೆ ರೋಗಿಗಳಿಗೆ ಸೇವೆ ನೀಡಲು ಸಿಬ್ಬಂದಿಗಳ ನೇಮಕಾತಿಗೂ ಸಂಪುಟ ಒಪ್ಪಿಗೆ ನೀಡಿದ್ದು, ಹಣಕಾಸು ಇಲಾಖೆಯು ಸಹಮತಿ ಕೊಟ್ಟಿದೆ.












Click it and Unblock the Notifications