ಪಿಎಸ್ಐ ನೇಮಕಾತಿಯಲ್ಲಿ ಅನ್ಯಾಯ; ಅಧ್ಯಯನಕ್ಕೆ ಸಮಿತಿ ರಚನೆ
ಕಲಬುರಗಿ, ಫೆಬ್ರವರಿ 20; "ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಪಿಎಸ್ಐ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಇಲ್ಲಿನ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಆದ್ದರಿಂದ ನೇಮಕಾತಿಗೆ ತಡೆ ನೀಡಲಾಗಿದ್ದು, ಈ ಕುರಿತು ಅಧ್ಯಯನಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಅತಿಥಿಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ 371ಜೆ ವಿಶೇಷ ವಿಶೇಷ ಸ್ಥಾನಮಾನದ ಕಾಯ್ದೆ ಮತ್ತು ಆದೇಶಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಸದರಿ ಸಮಿತಿಯಲ್ಲಿ ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಡಿಪಿಎಆರ್ ಕಾರ್ಯದರ್ಶಿ ಹಾಗೂ ಡಿಜಿಪಿ ಸಹ ಇದ್ದಾರೆ" ಎಂದರು.
ಪತ್ರಿಕಾಗೋಷ್ಠಿ ಬಳಿಕ ಸಚಿವರು ಕಲಬುರಗಿ ಜಿಲ್ಲೆ ಮತ್ತು ಮಹಾನಗರ ವ್ಯಾಪ್ತಿಯಲ್ಲಿನ ಶಾಂತಿ, ಸುವ್ಯವಸ್ಥೆ ಪಾಲನೆ ಹಾಗೂ ಅಪರಾಧಗಳ ಕುರಿತು ಸಮಗ್ರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಗತ್ಯ ನಿರ್ದೇಶನಗಳನ್ನು ನೀಡಿದರು.

ಹಿಬಾಜ್ ಪ್ರಕರಣ; ಹಿಜಾಬ್ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಈ ಕುರಿತು ರಾಜ್ಯದ ಉಚ್ಛ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವನ್ನು ಪಾಲನೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳು ವೇಷ-ಭೂಷಣ ಹಾಕಿಕೊಂಡು ಬರುವುದು ಸರಿಯಲ್ಲ" ಎಂದು ತಿಳಿಸಿದರು.
"ಹಿಜಾಬ್ ಪ್ರಕರಣ ಹಿಡಿದಿಟ್ಟುಕೊಂಡು ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಯಾರು ಮಾಡಬಾರದು. ವಸ್ತ್ರ್ರ ನೀತಿ ಸಂಹಿತೆ ಅಂದರೆ ಅದು ಸಮಾನತೆ. ಶಾಲೆಯಲ್ಲಿ ಬಡವ-ಬಲಿದ ಎನ್ನದೆ ಎಲ್ಲಾ ಮಕ್ಕಳು ಸಮಾನರಾಗಿದ್ದಾರೆ. ಐಕ್ಯತೆ, ಸಮಗ್ರತೆ ಮತ್ತು ಉತ್ತಮ ಸಂಸ್ಕಾರ ತುಂಬುವ ಕೆಲಸ ಶಾಲೆಗಳಿಂದ ಆಗಬೇಕಿದೆ. ಇದನ್ನು ನಾವೆಲ್ಲರು ಬೆಂಬಲಿಸಬೇಕಿದೆ" ಎಂದರು.
"ಹಿಜಾಬ್ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣದಲ್ಲಿ ಬೆರಳಣಿಕೆ ಕಡೆ ಅನಗತ್ಯ ಗೊಂದಲ ಮೂಡಿಸಲಾಗುತ್ತಿದೆ. ಕೆಲವು ದುಷ್ಟಶಕ್ತಿಗಳು, ಸಂಘನೆಗಳು ಈ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸಿದೆ. ಇಂತವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ, ಉಡುಪಿಯಲ್ಲಿ ಇದೇ ವಿಷಯದಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.
ನಿರ್ಗಮನ ಪಥ ಸಂಚಲನ; ಗೃಹ ಸಚಿವ ಆರಗ ಜ್ಞಾನೇಂದ್ರ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ 1ನೇ ತಂಡದ ಡಿಎಸ್‍ಪಿ/ 10ನೇ ತಂಡದ ಪೊಲೀಸ್. ಪಿ.ಎಸ್.ಐ (ಸಿವಿಲ್), 6ನೇ ತಂಡದ ಆರ್.ಎಸ್.ಐ./ ಸ್ಪೆಷಲ್ ಆರ್.ಎಸ್.ಐ./ 6ನೇ ತಂಡದ ಪಿ.ಎಸ್.ಐ. (ನಿಸ್ತಂತು) ಹಾಗೂ 2ನೇ ತಂಡದ ಪಿ.ಎಸ್.ಐ. (ಎಫ್.ಪಿ.ಬಿ.) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಸಮಾರಂಭದಲ್ಲಿ ಪಾಲ್ಗೊಂಡರು.
"ರಾಜ್ಯದ 1 ಲಕ್ಷ ಪೊಲೀಸ್ ಬಲಕ್ಕೆ ಇಂದು 288 ಜನ ಪೊಲೀಸ್ ಅಧಿಕಾರಿಗಳಾದ ನೀವು ಹೊಸ ಶಕ್ತಿಯಾಗಿ ಸೇರ್ಪಡೆಯಾಗುತ್ತಿದ್ದು, ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವಜನಿಕರ ಆಸ್ತಿ-ಪಾಸ್ತಿ, ಪ್ರಾಣಿ ಹಾನಿ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಸರ್ವರ ಕಲ್ಯಾಣಕ್ಕಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು" ಎಂದು ಸಚಿವರು ಕರೆ ನೀಡಿದರು.
"ಕರ್ನಾಟಕ ಪೊಲೀಸ್‌ಗೆ ದೇಶದಲ್ಲಿ ಅತ್ಯುನ್ನತವಾದ ಸ್ಥಾನವಿದೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಹೊಸದಾಗಿ ಸೇರ್ಪೆಯಾಗುವ ಪೊಲೀಸರ ಮೇಲಿದೆ. ಪೊಲೀಸ್ ಠಾಣೆಗೆ ಹೋದರೆ ಗೌರವ ಸಿಗುವುದಿಲ್ಲ ಎಂಬ ಸಾಮಾನ್ಯ ದೂರು ಸಾರ್ವಜನಿಕರದ್ದಾಗಿದೆ. ಠಾಣೆಗೆ ನ್ಯಾಯ ಕೇಳಿ ಬರುವ ಅಸಹಾಯಕರಿಗೆ, ಬಡವರಿಗೆ ನ್ಯಾಯ ಒದಗಿಸುವ, ಅಭಯ ನೀಡುವ ಮತ್ತು ಅವರನ್ನು ಗೌರಯುತವಾಗಿ ನಡೆದುಕೊಳ್ಳುವ ಕರ್ತವ್ಯ ನಿಮ್ಮದಾಗಿದೆ" ಎಂದು ಹೇಳಿದರು.
"ನಮ್ಮ ಸರ್ಕಾರ ಬರುವ ಮುನ್ನ 1 ಲಕ್ಷ ಪೊಲೀಸ್ ಬಲದಲ್ಲಿ 35 ಸಾವಿರ ಹುದ್ದೆಗಳು ಖಾಲಿ ಇದ್ದವು. ಕಳೆದ ಮೂರು ವರ್ಷದಲ್ಲಿ ಪಿ.ಎಸ್.ಐ, ಎ.ಎಸ್.ಐ, ವೈಜ್ಣಾನಿಕ ಅಧಿಕಾರಿ, ಕ್ರೈಮ್ ಅಧಿಕಾರಿ, ಪೇದೆ ಒಟ್ಟು 16,811 ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ 2022-23 ರಲ್ಲಿ 4,500 ಪೇದೆ, 300 ಪಿ.ಎಸ್.ಐ. ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ" ಎಂದು ಸಚಿವರು ತಿಳಿಸಿದರು.
ಕಳವಳ ವ್ಯಕ್ತಪಡಿಸಿದ ಸಚಿವರು; "ನಾನು ಪ್ರವಾಸ ಮಾಡಿದ ಎಲ್ಲೆಡೆ ಠಾಣೆ ಮೇಲ್ದರ್ಜೇಗೇರಿಸಿ, ಹೊಸ ಠಾಣೆ ಮಂಜೂರು ಮಾಡಿ ಎಂಬ ಪ್ರಸ್ತಾವನೆ ಹೆಚ್ಚು ಬರುತ್ತಿವೆ. ಮೌಲ್ಯಯುತ ಶಿಕ್ಷಣದ ಕೊರತೆ ಪರಿಣಾಮ ಅಪರಾಧಗಳ ಸಂಖ್ಯೆ ಹೆಚ್ಚಾಗಿ ಪೊಲೀಸ್ ಠಾಣೆಗೆ ಬೇಡಿಕೆ ಹೆಚ್ಚಿದ್ದು ಕಳವಳಕಾರಿಯಾಗಿದೆ. ನೈತಿಕ ಮೌಲ್ಯ ನೀಡುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ" ಎಂದರು.












Click it and Unblock the Notifications