ಕಲಬುರಗಿ; ಪಿಎಸ್‌ಐ ನೇಮಕಾತಿ ಹಗರಣ, ಆರೋಪಿಗಳಿಗೆ ಜಾಮೀನು ಇಲ್ಲ
ಕಲಬುರಗಿ, ಜೂ 16: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಗಳಾದ ಶಾಂತಿಬಾಯಿ ಮತ್ತು ಆಕೆಯೆ ಪತಿ ಬಸ್ಯಾನಾಯಕ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ತನಿಖೆ ಪ್ರಾರಂಭವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಇಬ್ಬರೂ ಕೆಲವು ದಿನಗಳ ಹಿಂದೆ ಸಿಕ್ಕಿಬಿದ್ದಿದ್ದರು.
ಶಾಂತಿಬಾಯಿ ಮತ್ತು ಆಕೆಯ ಪತಿ ಬಸ್ಯಾನಾಯಕನನ್ನು ಹೈದರಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿ ದಂಪತಿ ಜಾಮೀನು ಕೋರಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 3 ನೇ ಜೆಎಂಎಫ್‌ಸಿ ನ್ಯಾಯಾಧೀಶ ಶ್ರೀನಿವಾಸ. ಕೆ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ.
ಶಾಂತಿಬಾಯಿ ನೀರಾವರಿ ಇಲಾಖೆ ಇಂಜಿನಿಯರ್ ಮುಂಜುನಾಥ ಮೇಳಕುಂದಿ ಸಹಾಯದಿಂದ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್‌ಐ ಪರೀಕ್ಷೆ ಬರೆದು ಪಾಸಾಗಿದ್ದರು. ಅಕ್ರಮ ಹೊರಬರುತ್ತಿದಂತೆ ಪತಿ ಹಾಗೂ ಮಕ್ಕಳ ಜತೆ ತಲೆಮರೆಸಿಕೊಂಡಿದ್ದರು. ಹಣ ನೀಡಿ ಒಎಂಆರ್ ಶೀಟ್‌ನಲ್ಲಿ ನಕಲು ಮಾಡಿದ್ದಾರೆ ಎಂಬುದು ಆರೋಪ.

ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಸಹಚರರ ಬಂಧನ; ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕಿಂಗ್‌ಪಿನ್ ರುದ್ರಗೌಡ ಪಾಟೀಲನ ಮತ್ತಿಬ್ಬರು ಸಹಚರರನ್ನು ಶುಕ್ರವಾರ ಬಂಧಿಸಿದ್ದಾರೆ.
ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಮಹೇಶ್ ಹಿರೋಹಳ್ಳಿ, ಸೈಫನ್ ಜಮಾದಾರ್ ಬಂಧಿತರು. ಬಂಧಿತ ಸೈಫನ್ ಸಹೋದರ ಇಸ್ಮಾಯಿಲ್ ಖಾದರ್ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿದೆ. ಈತ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪವಿದೆ.

ಈತನ ಸಹೋದರ ಸೈಫನ್ ಜಮಾದಾರ್ ಸಹೋದರನ ಅಕ್ರಮಕ್ಕೆ ಸಹಕಾರ ನೀಡಿದ್ದ. ಬಂಧಿತ ಮಹೇಶ್ ಹಿರೋಹಳ್ಳಿ ಸಹ ಅಕ್ರಮದಲ್ಲಿ ಶಾಮೀಲಾಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಮಹೇಶ್ ಮತ್ತು ಸೈಫನ್ ಇಬ್ಬರೂ ಸಹ ಆರ್ ಡಿ ಪಾಟೀಲ್ ಪರಮಾಪ್ತರು. ಅಕ್ರಮದಲ್ಲಿ ಭಾಗಿಯಾಗಿದ್ದ ಇಸ್ಮಾಯಿಲ್ ಖಾದರ್ ತಲೆಮರೆಸಿಕೊಂಡಿದ್ದಾನೆ. ಸಿಐಡಿ ಹುಡುಕಾಟ ನಡೆಸುತ್ತಿದೆ.












Click it and Unblock the Notifications