ಸೊನ್ನ ಬ್ಯಾರೇಜ್‌ನಿಂದ ಒಳಹರಿವು, ಭೀಮಾ ತೀರದಲ್ಲಿ ಪ್ರವಾಹ ಭೀತಿ
ಕಲಬುರಗಿ, ಸೆ.07: ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ಸೋಮವಾರ ಸಾಯಂಕಾಲ 35,088 ಕ್ಯುಸೆಕ್ ನೀರು ಒಳಹರಿವು ಹೆಚ್ಚಾಗಿ ಬ್ಯಾರೇಜ್ ಭರ್ತಿಯಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆ.ಎನ್.ಎನ್.ಎಲ್) ಭೀಮಾ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಅಶೋಕ ಝಕಾ ತಿಳಿಸಿದ್ದಾರೆ.
ಬ್ಯಾರೇಜಿನ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಮತ್ತು ವೀರ್ ಮತ್ತು ಉಜನಿ ಡ್ಯಾಂನಿಂದ ಹೆಚ್ಚಿನ ನೀರು ಬಿಡುವ ಸಾಧ್ಯತೆ ಇರುವುದರಿಂದ ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ 35,088 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸೊನ್ನ ಬ್ಯಾರೇಜಿನಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ. ಮುಂದೆಯೂ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದ್ದು, ಒಳಹರಿವಿನಷ್ಟೆ ಪ್ರಮಾಣದ ನೀರು ಭೀಮಾನದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕೆ.ಎನ್.ಎನ್.ಎಲ್. ಭೀಮಾ ಏತ ನೀರಾವರಿ ಯೋಜನೆ ಕಚೇರಿ ಪ್ರಕಟಣೆಯಲ್ಲಿ ಹೇಳಲಾಗಿದೆ.
''ಸೋಮವಾರ ರಾತ್ರಿ 10ಗಂಟೆ ವೇಳೆಗೆ ಸೊನ್ನಾ ಬ್ಯಾರೇಜ್ ನೀರಿನ ಮಟ್ಟ 405.30 ಮೀಟರ್ ನಷ್ಟಿತ್ತು, ಗೇಟ್ ತೆರೆದು 13,000 ಕ್ಯೂಸೆಕ್ಸ್ ನೀರು ಹೊರಗೆ ಹರಿಸಲಾಗಿದೆ,'' ಎಂದು ಕಾರ್ಯಕಾರಿ ಇಂಜಿನಿಯರ್ ಅಶೋಕ ಹೇಳಿದ್ದಾರೆ.

ಭೀಮಾ ತೀರದಲ್ಲಿ ಪ್ರವಾಹ ಆತಂಕ:
ಆದ್ದರಿಂದ ಸೊನ್ನ ಬ್ಯಾರೇಜ್ ಕೆಳಭಾಗದಲ್ಲಿರುವ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ತಾಲೂಕುಗಳು ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ಯಾರೇಜ್ ಕೆಳಗಡೆ ಬರುವ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳ ರೈತರು ನದಿಯ ದಡಕ್ಕೆ ಹೋಗಬಾರದು. ಅಲ್ಲದೆ ತಮ್ಮ ಜಾನುವಾರುಗಳನ್ನು ನದಿಯ ದಡಕ್ಕೆ ಬಿಡದಂತೆ ಎಚ್ಚರ ವಹಿಸಬೇಕು. ಜಲಾಶಯ ಮತ್ತು ಜಲಾಶಯದ ಕಾಲುವೆಗಳ ದಂಡೆಯಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರು ನದಿಯ ದಂಡೆಗೆ ಹೋಗದಂತೆ ಹಾಗೂ ನದಿ ದಂಡೆಯಲ್ಲಿ ಬಟ್ಟೆ ಒಗೆಯುವುದಾಗಲಿ, ವಾಹನ ತೊಳೆಯುವುದಾಗಲಿ ಮಾಡಬಾರದು ಎಂದು ಜಿಲ್ಲಾಡಳಿತ ಹೇಳಿದೆ.
ಕಲಬುರಗಿಯ ಜಿಲ್ಲೆ ಭೀಮಾ ತೀರದಲ್ಲಿ ಪ್ರವಾಹ ಆತಂಕ
— oneindiakannada (@OneindiaKannada) September 7, 2021
ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ 35088 ಕ್ಯೂಸೆಕ್ ನೀರು ಬಿಡುಗಡೆ#Kalaburagi #sonnabarrage #Bhima pic.twitter.com/Q9Zr0TU3xT
ಅದೇ ರೀತಿ ಸೊನ್ನ ಬ್ಯಾರೇಜಿನ ಕೆಳಗಡೆ ಬರುವ ಇನ್ನಿತರ ಬ್ಯಾರೇಜ್‍ಗಳ ಅಧಿಕಾರಿಗಳು ಎಚ್ಚರವಹಿಸಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತ ಕಾಗಿಣಾ ನದಿಯಿಂದ ಉಂಟಾದ ಪ್ರವಾಹ ಕೊಂಚಮಟ್ಟಿಗೆ ತಗ್ಗಿದೆ. ಕಲಬುರಗಿ-ಸೇಡಂ-ಮೆಹಬೂಬನಗರ-ಹೈದ್ರಬಾದ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾದ ಮಳಖೇಡ ಸೇತುವೆ ಈಗ ಸಂಚಾರಕ್ಕೆ ಮುಕ್ತವಾಗಿದೆ.












Click it and Unblock the Notifications