ಕಲಬುರಗಿ; ರಾಷ್ಟ್ರೀಯ ಹೆದ್ದಾರಿ, ಹೊಸ ಸೇತುವೆ ಅಪ್‌ಡೇಟ್
ಕಲಬುರಗಿ, ಫೆಬ್ರವರಿ 19; ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ಹೊಸ ಸೇತುವೆಗಳ ಕುರಿತು ಹಲವು ಸೂಚನೆಗಳನ್ನು ನೀಡಿದ್ದಾರೆ. ಶಹಾಬಾದ-ವಾಡಿ ರಾಷ್ಟ್ರೀಯ ಹೆದ್ದಾರಿ ನಡುವೆ ಸೇತುವೆ ನಿರ್ಮಾಣದ ಕುರಿತು ಚರ್ಚೆ ನಡೆದಿದೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ 'ದಿಶಾ' ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದರು. ಹಲವು ಯೋಜನೆಗಳ ಕುರಿತು ಚರ್ಚಿಸಿದರು.

"ರಾಷ್ಟ್ರೀಯ ಹೆದ್ದಾರಿ 150ರ ಮಧ್ಯದಲ್ಲಿ ಬರುವ ಜಿಲ್ಲೆಯ ಶಹಾಬಾದ-ವಾಡಿ ನಡುವಿನ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕೆಲಸ ಹಿನ್ನೆಲೆಯಲ್ಲಿ ನಿರ್ಮಿಸಲಾದ ಪರ್ಯಾಯ ಕಚ್ಚಾ ರಸ್ತೆ ತುಂಬಾ ಹದಗೆಟ್ಟಿದ್ದು, ಅಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು" ಎಂದು ಸೂಚನೆ ನೀಡಿದರು.
ಸಭೆಯಲ್ಲಿ ವಿವಿಧ ಯೋಜನೆಗಳ ಚರ್ಚೆ: ಶಹಾಬಾದ-ವಾಡಿ ರಸ್ತೆ ವಿಷಯ ಪ್ರಸ್ತಾಪಿಸಿ 58 ಕೋಟಿ ರೂ. ವೆಚ್ಚದಲ್ಲಿ ಸೇತುವ ನಿರ್ಮಿಸಲಾಗುತ್ತಿದೆ. ಪರ್ಯಾಯ ಕಚ್ಚಾ ರಸ್ತೆ ಹದಗೆಟ್ಟ ಕಾರಣ ಅನೇಕ ರಸ್ತೆ ಅಪಘಾತಗಳಾಗಿವೆ. ದ್ವಿಚಕ್ರ ಸವಾರರ ಪ್ರಯಾಣ ಸವಾಲಿನದ್ದಾಗಿದೆ. ರಸ್ತೆ ಅಪಘಾತದಿಂದ ಪ್ರಾಣ ಹಾನಿ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಮಾಡಿ ಎಂದು ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಲಾಯಿತು.
ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವಾಗ ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಚರ್ಚಿಸಲಾಯಿತು. ಕಚ್ಚಾ ರಸ್ತೆ ತುಂಬಾ ಗುಂಡಿ ಇದ್ದು, ಸಂಚಾರಕ್ಕೆ ಯೋಗ್ಯವಿಲ್ಲ. ಹೆಚ್ಚಿನ ಟ್ರಾಫಿಕ್ ಇರುವುದರಿಂದ ಮಹಿಳೆಯರು, ವೃದ್ಧರು, ಮಕ್ಕಳು ಪ್ರಯಾಣ ಮಾಡಬೇಕೆಂದರೆ ದೊಡ್ಡ ಹರಸಾಹಸವಾಗಿದೆ. ಕೂಡಲೇ ಇದನ್ನು ಸರಿಪಡಿಸಿ ಸಂಚಾರಕ್ಕೆ ಸುಗಮಗೊಳಿಸಬೇಕು ಎಂದು ಸಂಸದರು ಸೂಚಿಸಿದರು.
ವಾಡಿಯ ಬಲರಾಮ್ ಚೌಕ್ ಬಳಿ ರೈಲ್ವೆ ಕ್ರಾಸ್ ಮೇಲೆ ಆರ್.ಓ.ಬಿ ಸೇತುವೆ (ಎಲ್.ಸಿ-3) ನಿರ್ಮಾಣ ಮಾಡದ ಕಾರಣ ಗಂಟೆಗಟ್ಟಲೇ ಪ್ರಯಾಣಿಕರು ಅಲ್ಲಿ ನಿಲ್ಲಬೇಕಿದೆ. 4 ವರ್ಷದಿಂದ ನೆನೆಗುದ್ದಿಗೆ ಬಿದ್ದಿರುವ ಕಾರಣ ಜನ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದ ಸಂಸದ ಡಾ. ಉಮೇಶ್ ಜಾಧವ್ ಅಸಮಾಧಾನ ವ್ಯಕ್ತಪಡಿಸಿ ಕಾಮಗಾರಿ ಪ್ರಗತಿ ಎಲ್ಲಿಗೆ ಬಂದಿದೆ? ಎಂದು ಪ್ರಶ್ನಿಸಿದರು.
ರೈಲ್ವೆ ಅಧಿಕಾರಿಗಳು ಮಾತನಾಡಿ ಪ್ರಸ್ತಾವಿತ 58 ಮೀಟರ್ ಆರ್.ಓ.ಬಿ ನಿರ್ಮಾಣ ರೈಲ್ವೆ ಇಲಾಖೆ ಮಾಡಬೇಕಿತ್ತು, ಕಾರಣಾಂತರ ಆಗಿಲ್ಲದ ಕಾರಣ ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಆರ್.ಓ.ಬಿ. ನಿರ್ಮಿಸಲು ಅನುಮತಿ ನೀಡಲಾಗಿದೆ. ಇದೀಗ ಜಿ.ಎ.ಡಿ. ಅನುಮೋದನೆಗೆ ಸೆಂಟ್ರಲ್ ರೈಲ್ವೆ ವಲಯ ಕಚೇರಿಯಲ್ಲಿ ಬಾಕಿ ಇದ್ದು, ಅದು ಒಪ್ಪಿಗೆ ಪಡೆದ ತಕ್ಷಣವೆ ಆರ್.ಓ.ಬಿ. ನಿರ್ಮಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ರೈಲ್ವೆ ಇಲಾಖೆಯಿಂದ ಜಿ.ಎ.ಡಿ (ಜನರಲ್ ಅಲಯನ್ ಮೆಂಟ್ ಡ್ರಾಯಿಂಗ್) ಅನುಮೋದನೆ ಸಿಕ್ಕ ತಕ್ಷಣವೆ ಟೆಂಡರ್ ಕರೆದು ಕೆಲಸ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಇ ಮೊಹಮ್ಮದ್ ಇಬ್ರಾಹಿಂ ಅವರಿಗೆ ಸಂಸದ ಡಾ. ಉಮೇಶ್ ಜಾಧವ್ ಸೂಚಿಸಿದರು.
ಚಿತ್ತಾಪೂರ-ಜೇವರ್ಗಿ ರಸ್ತೆ ಸಂಪರ್ಕ ಕಲ್ಪಿಸುವ ಚಾಮನೂರ-ನರಿಬೋಳ ಸೇತುವೆ ಕಾಮಗಾರಿ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಂಸದರು ಈ ಕುರಿತು ಇದೂವರೆಗಿನ ಪ್ರಗತಿ ಬಗ್ಗೆ ವರದಿ ಕೊಡಿ ಎಂದು ರಾಷ್ಟ್ರಿಯ ಹೆದ್ದಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಲಬುರಗಿ ನಗರದ ಹುಮನಾಬಾದ-ರಾಮ ಮಂದಿರ ವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ 12.63 ಕಿ.ಮೀ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 56 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೆಲವು ಕಡೆ ರಸ್ತೆ ಅತಿಕ್ರಮಣವಾಗಿದ್ದು, ಅದರು ತೆರವುಗಳಿಗೆ ವಶಕ್ಕೆ ಪಡೆದು ಕೂಡಕೇ ಸರ್ವೀಸ್ ರಸ್ತೆ ಮಾಡಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.
ಜಿಲ್ಲೆಯಲ್ಲಿ ಹಾದು ಹೋಗಲಿರುವ 71 ಕಿ. ಮೀ. ಸೂರತ್-ಚೆನ್ನೈ ಎಕಾನಾಮಿಕ್ ಕಾರಿಡಾರ್ ರಸ್ತೆ ಪ್ರಗತಿ ಸಭೆಯಲ್ಲಿ ಮಾಹಿತಿ ಪಡೆಯಲಾಯಿತು. ಇದು ಸಿಂಗಾಪೂರ ಮಾದರಿ ರಸ್ತೆಯಾಗಿದ್ದು, ಇದು ನಿರ್ಮಾಣವಾದಲ್ಲಿ 50 ನಿಮಿಷದಲ್ಲಿ ಸೋಲಾಪುರ ತಲುಪಬಹುದು. ಬೆಂಗಳೂರು ಪ್ರಯಾಣ ಸಮಯ ಸಹ ಕಡಿಮೆಯಾಗಲಿದೆ ಎಂದು ಸಂಸದರು ಹೇಳಿದರು.












Click it and Unblock the Notifications