ಕಲಬುರಗಿ; ಆಳಂದ ಉದ್ವಿಗ್ನ, ಮಾ. 5ರ ತನಕ ನಿಷೇಧಾಜ್ಞೆ
ಕಲಬುರಗಿ, ಮಾರ್ಚ್ 02; ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರದಲ್ಲಿ ಜಟಾಪಟಿ ನಡೆದಿದೆ. ಇದರಿಂದಾಗಿ ಪಟ್ಟಣ ಉದ್ವಿಗ್ನಗೊಂಡಿದ್ದು, ಮಾರ್ಚ್ 5ರ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹಿಂದೂ-ಮುಸ್ಲಿಂ ಸಂಘಟನೆಗಳ ವಿವಾದದ ಕೇಂದ್ರವಾದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಬಸವರಾಜ ಮುತ್ತಿಮೂಡ, ರಾಜಕುಮಾರ ಪಾಟೀಲ್ ತೇಲ್ಕೂರ ಮುಂತಾದವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳ ಸದಸ್ಯರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಸಚಿವ, ಶಾಸಕರು, ಜಿಲ್ಲಾಧಿಕಾರಿ, ಎಸ್‌ಪಿ ಕಾರುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಎರಡೂ ಸಮುದಾಯದ ಅಪಾರ ಜನರು ಸೇರಿದ್ದರು.

ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಎರಡೂ ಕಡೆಯವರ ಜೊತೆ ಮಾತುಕತೆ ನಡೆಸಿದರು. 12 ಜನರು ದರ್ಗಾ ಒಳಗೆ ಹೋಗಿ ಲಿಂಗದ ಶುದ್ಧೀಕರಣ ಮಾಡಲು ಒಪ್ಪಿಗೆ ನೀಡಿದರು. ದರ್ಗಾದವರು ಇದಕ್ಕೆ ಒಪ್ಪಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ವಿವಾದ ಆಗಿದ್ದು ಏಕೆ?; ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಇತ್ತೀಚೆಗೆ ಕಿಡಿಗೇಡಿಯೊಬ್ಬ ಲಿಂಗದ ಬಳಿ ಗಲೀಜು ಮಾಡಿದ್ದ. ಇದರಿಂದಾಗಿ ಬಿಜೆಪಿ, ಶ್ರೀರಾಮ ಸೇನೆ ಕಾರ್ಯಕರ್ತರು ತೀವ್ರ ಹೋರಾಟ ನಡೆಸಿದ್ದರು.
ಶಿವರಾತ್ರಿ ದಿನವಾದ ಮಂಗಳವಾರ ಶಿವಲಿಂಗ ಶುದ್ಧೀಕರಣ ಮಾಡಿ ಪೂಜೆ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೇ ದಿನ ದರ್ಗಾದಲ್ಲಿ ಸಂದಲ್ ಹಾಗೂ ಶಬ್-ಎ-ಬರಾತ್ ಕಾರ್ಯಕ್ರಮವು ಆಯೋಜನೆಗೊಂಡಿತ್ತು. ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಮಾರ್ಚ್ 1ರಂದು ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಳಂದ ಚಲೋಗೆ ಕರೆ ಕೊಟ್ಟಿದ್ದರು. ಜಿಲ್ಲಾಡಳಿತ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ ಅವರನ್ನು ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೇಂದ್ರ ಸಚಿವ ಭಗವಂತ ಖೂಬಾ ಮುಂತಾದ ನಾಯಕರು ಮಂಗಳವಾರ ನಗರದಲ್ಲಿ ಬೃಹತ್ ಜಾಥಾ ಮೂಲಕ ದುರ್ಗಾಕ್ಕೆ ಆಗಮಿಸಿದರು. ದರ್ಗಾ ಆವರಣದಲ್ಲಿ ಎರಡೂ ಕಡೆಯವರು ಮುಖಾಮುಖಿಯಾದರು. ಇದರಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಸಂದಲ್ ಹಾಗೂ ಶಬ್-ಎ-ಬರಾತ್ ಕಾರ್ಯಕ್ರಮ ಇರುವುದರಿಂದ ಶಿವಲಿಂಗ ಶುದ್ಧೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ದರ್ಗಾ ಬಾಗಿಲು ಮುಚ್ಚಿದರು. ಇದು ಹಿಂದೂ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎರಡೂ ಕಡೆಯವರ ಮಾತುಕತೆ ನಡೆಯಿತು. 12 ಜನರು ಒಳಹೋಗಿ ಶಿವಲಿಂಗ ಶುದ್ಧೀಕರಣ ಮಾಡಲು ಒಪ್ಪಿಗೆ ನೀಡಲಾಯಿತು.
ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಇತರರು ಒಳಹೋಗಿ ಶಿವಲಿಂಗ ಶುದ್ಧೀಕರಣ ಮಾಡಿ ಪೂಜೆ ಸಲ್ಲಿಸಿದರು. ಆದರೆ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಸಿ. ಆರ್. ಪಿ. ಸಿ ಕಾಯ್ದೆ-1973ರ ಕಲಂ 144, 144ಎ ಅನ್ವಯ ಆಳಂದ ತಾಲೂಕಿನಾದ್ಯಂತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಮಾರ್ಚ್ 5ರ ಬೆಳಗ್ಗೆ 6 ಗಂಟೆ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶ ಹೊರಡಿಸಿದರು.
ಡ್ರೋನ್ ಬಳಕೆ ಮಾಡಿದ ಪೊಲೀಸರು; ಮಂಗಳವಾರ ಆಳಂದ ಪಟ್ಟಣದಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಎಸ್‌ಪಿ ಕಾರುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದರು. ಈ ಸಂದರ್ಭದಲ್ಲಿ ಮನೆಯ ಮೇಲೆ ಕಲ್ಲು, ಇಟ್ಟಿಗೆ, ಬಡಿಗೆ ಸಂಗ್ರಹ ಮಾಡಿದವರನ್ನು ಪತ್ತೆ ಹಚ್ಚಲು ಪೊಲೀಸರು ಡ್ರೋನ್ ಕ್ಯಾಮರಾ ಬಳಕೆ ಮಾಡಿದರು.












Click it and Unblock the Notifications