Gulbarga Dakshin Constituency: ರೇವೂರ್ ಕುಟುಂಬದ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್? ಯಾರಿಗೆ ಹ್ಯಾಟ್ರಿಕ್ ಗೆಲುವು?
ದತ್ತಾತ್ರೇಯ ಪಾಟೀಲ್ ರೇವೂರ್ ಕಣಕ್ಕಿಳಿಯುವುದು ಫಿಕ್ಸ್ ಆಗಲಿದ್ದು, ರೇವೂರ್ ಅವರನ್ನ ಸೋಲಿಸಲು ಕಾಂಗ್ರೆಸ್ ಭರ್ಜರಿಗೆ ತಯಾರಿ ನಡೆಸಿದೆ. ವರದಿ, ವಿಶ್ಲೇಷಣೆ ಓದಿ
ಬಿಸಿಲ ನಾಡು ಎಂತಲೇ ಕಲಬುರಗಿ ಜಿಲ್ಲೆ ಪ್ರಸಿದ್ಧಿಯಾಗಿದ್ದು, ತೊಗರಿ ಕಣಜವಾಗಿಯೂ ಹೆಸರು ಮಾಡಿದೆ. ಕಲಬುರಗಿ ಜಿಲ್ಲೆ 9 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅದರಲ್ಲಿ ಕಲಬುರಗಿ ದಕ್ಷಿಣ ಕೂಡ ಪ್ರಮುಖ ವಿಧಾನಸಭಾ ಕ್ಷೇತ್ರ. 2008ರಲ್ಲಿ ಗುಲ್ಬರ್ಗಾ ಕ್ಷೇತ್ರ ಪುನರ್ ವಿಂಗಡಣೆಯಾಗಿ ಅಸ್ತಿತ್ವಕ್ಕೆ ಬಂದ ಕ್ಷೇತ್ರಗಳಲ್ಲಿ ಗುಲ್ಬರ್ಗಾ ದಕ್ಷಿಣ ಕೂಡ ಒಂದು. ಕಲಬುರಗಿ ನಗರಕ್ಕೆ ಹೊಂದಿಕೊಂಡಂತೆ ಕೆಲ ನಗರ ಪ್ರದೇಶಗಳನ್ನು ಹೊಂದಿರುವ ಗುಲ್ಬರ್ಗಾ ದಕ್ಷಿಣ ಕ್ಷೇತ್ರ ಶೇ.95ರಷ್ಟು ಭಾಗ ಗ್ರಾಮೀಣ ಪ್ರದೇಶದಿಂದಲೇ ಕೂಡಿದೆ. ಪ್ರಮುಖವಾಗಿ ಇಲ್ಲಿನ ರೈತರು ತೊಗರಿ, ಹತ್ತಿಯನ್ನು ಬೆಳೆಯುತ್ತಾರೆ.
ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಕೂಡ ಇದೆ. ಇಲ್ಲಿನ ರೈತರು ಮಳೆಯನ್ನೇ ಆಶ್ರಯಿಸಿದ್ದು, ಕೆಲವು ಕಡೆ ಕಬ್ಬನ್ನು ಕೂಡ ಬೆಳೆಯಲಾಗುತ್ತದೆ. ಇಲ್ಲಿ ಹೆಚ್ಚು ತೊಗರಿಯನ್ನು ಉತ್ಪಾದಿಸಲಾಗುತ್ತಿದ್ದು, ತೊಗರಿಯ ಕಣಜ ಎಂದು ಖ್ಯಾತಿ ಪಡೆದಿದೆ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು, ದಲಿತರು, ಬ್ರಾಹ್ಮಣರು, ಒಬಿಸಿ ಮತಗಳು ಅಧಿಕ. ಈ ಪೈಕಿ ಬ್ರಾಹ್ಮಣ, ಲಿಂಗಾಯತ ಸಮುದಾಯದ ಉಪ ಜಾತಿ ಆದಿ ಲಿಂಗಾಯತ ಮತಗಳೇ ನಿರ್ಣಾಯಕ. ಇನ್ನೂ ಈ ಕ್ಷೇತ್ರದ ರಾಜಕೀಯ ಕೂಡ ವಿಶಿಷ್ಟವಾಗಿದ್ದೂ ಒಂದೇ ಕುಟುಂಬಕ್ಕೆ ಮತದಾರರು ಸತತವಾಗಿ ಜೈಕಾರ ಹೇಳುತ್ತಾ ಬಂದಿದ್ದಾರೆ. ರೇವೂರ್ ಪಾಟೀಲ್ ಕುಟುಂಬದ ಭದ್ರಕೋಟೆಯಾಗಿ ಗುಲ್ಬರ್ಗಾ ದಕ್ಷಿಣ ಹೊರಹೊಮ್ಮಿದೆ.

ಕ್ಷೇತ್ರದ ರಾಜಕೀಯ ಇತಿಹಾಸ!
ಹೌದು, 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಸೃಷ್ಟಿಯಾದ ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ರೇವೂರ್ ಪಾಟೀಲ್ ಕುಟುಂಬದವರೇ ಇಲ್ಲಿಯವರೆಗೂ ಗೆದ್ದಿದ್ದಾರೆ. ಮೂರು ಸಾರ್ವತ್ರಿಕ ಚುನಾವಣೆ ಹಾಗೂ ಒಂದು ಉಪಚುನಾವಣೆಯನ್ನು ಕಂಡಿರುವ ಕ್ಷೇತ್ರದಲ್ಲಿ ಒಂದೇ ಕುಟುಂಬದವರು ಆಯ್ಕೆಯಾಗಿರುವುದು ವಿಶೇಷ. 2008ರಲ್ಲಿ ಚಂದ್ರಶೇಖರ್ ಪಾಟೀಲ್ ರೇವೂರ್ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಅವರು ಅಕಾಲಿಕವಾಗಿ ನಿಧನರಾಗಿದ್ದರಿಂದ 2010ರಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು.
ಆದರೆ, ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ರೇವೂರ್ ಪಾಟೀಲ್ ಕುಟುಂಬಕ್ಕೆ ಟಿಕೆಟ್ ನಿರಾಕರಿಸಿ ಶಶಿಲ್ ನಮೋಶಿಗೆ ಟಿಕೆಟ್ ನೀಡಿತು. ಆದರೆ, ಚಂದ್ರಶೇಖರ್ ಪಾಟೀಲ್ ರೇವೂರ್ ಅವರ ಸೊಸೆ ಅರುಣಾ ಪಾಟೀಲ್ ರೇವೂರ್ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದು ಬೀಗಿದರು. 2013ರಲ್ಲಿ ಘರ್ ವಾಪಸಿ ಎಂಬಂತೆ ಬಿಜೆಪಿಗೆ ರೇವೂರ್ ಕುಟುಂಬ ವಾಪಸ್ ಆಯಿತು. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ದತ್ತಾತ್ರೇಯ ಪಾಟೀಲ್ ರೇವೂರ್ ಗೆದ್ದು ಶಾಸಕರಾಗಿ ವಿಧಾನಸಭೆಯನ್ನು ಮೊದಲ ಬಾರಿ ಪ್ರವೇಶಿಸುತ್ತಾರೆ. 2018ರಲ್ಲಿಯೂ ದತ್ತಾತ್ರೇಯ ಪಾಟೀಲ್ ಅವರೇ ಸತತ 2ನೇ ಬಾರಿ ಗೆಲುವು ಸಾಧಿಸಿ, ಕೆಕೆಆರ್‌ಡಿಬಿ ಅಧ್ಯಕ್ಷರಾಗಿಯೂ ನೇಮಕವಾಗಿದ್ದರು.

2018ರಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ 64,788 ಮತಗಳನ್ನು ಪಡೆದು ಸುಮಾರು 5 ಸಾವಿರ ಮತಗಳಿಂದ ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಲ್ಲಮಪ್ರಭು ಪಾಟೀಲ್ 59,357 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೇ, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಸವರಾಜ್ ದಿಗ್ಗಾವಿ 14,359 ಮತಗಳನ್ನು ಪಡೆಯಲು ಮಾತ್ರ ಶಕ್ತರಾಗಿದ್ದರು. ಸಾವಿರಕ್ಕೂ ಹೆಚ್ಚು ನೋಟಾ ಮತಗಳು ಇಲ್ಲಿ ಚಲಾವಣೆ ಆಗಿದ್ದವು ಎಂಬುದು ಗಮನಾರ್ಹ.
2023ರ ಚುನಾವಣೆಗೆ ಆಕಾಂಕ್ಷಿಗಳು ಯಾರು?
2023ರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮತ್ತೊಂದು ಬಾರಿ ದತ್ತಾತ್ರೇಯ ಪಾಟೀಲ್ ರೇವೂರ್ ಕಣಕ್ಕಿಳಿಯುವುದು ಫಿಕ್ಸ್ ಆಗಿದೆ. ಕಾಂಗ್ರೆಸ್‌ನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ ಬಳಸಿಕೊಳ್ಳಲು ಹಲವು ಹೊಸ ಮುಖಗಳು ಟಿಕೆಟ್‌ಗಾಗಿ ಪೈಪೋಟಿಯಲ್ಲಿವೆ. ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಪುತ್ರ ಸಂತೋಷ ಬಿಲಗುಂದಿ, ಮಾಜಿ ಮೇಯರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ನೀಲಕಂಠ ಮೂಲಗೆ, ಮಾಜಿ ಜಿಪಂ ಸದಸ್ಯ ಸಂತೋಷ ಪಾಟೀಲ್ ದಣ್ಣೂರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಲ್ಲಿ ಅಲ್ಲಮಪ್ರಭು ಪಾಟೀಲ್ ಹೆಸರು ಮುಂಚೂಣಿಯಲ್ಲಿದ್ದರು, ಟಿಕೆಟ್ ನೀಡಬೇಡಿ ಎಂದು ಉಳಿದ ಆಕಾಂಕ್ಷಿಗಳು ಎಐಸಿಸಿಗೆ ಮನವಿ ಮಾಡಿದ್ದಾರೆ. ಸಂಘಟನೆ ಕೊರತೆ ಇರುವ ಜೆಡಿಎಸ್‌ನಿಂದ ಕೃಷ್ಣಾರೆಡ್ಡಿ ಟಿಕೆಟ್ ಆಕಾಂಕ್ಷಿ. ಆಮ್ ಆದ್ಮಿ ಪಕ್ಷದಿಂದ ಸಿದ್ದು ಪಾಟೀಲ್ ಕಣಕ್ಕಿಳಿಯುವ ತವಕದಲ್ಲಿದ್ದಾರೆ.
ಗುಲ್ಬರ್ಗಾ ದಕ್ಷಿಣದ ಜಾತಿ ಲೆಕ್ಕಾಚಾರ!
ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು, ದಲಿತರು, ಬ್ರಾಹ್ಮಣರು, ಒಬಿಸಿ ಮತಗಳು ಅಧಿಕ. ಈ ಪೈಕಿ ಬ್ರಾಹ್ಮಣ, ಲಿಂಗಾಯತ ಸಮುದಾಯದ ಉಪ ಜಾತಿ ಆದಿ ಲಿಂಗಾಯತ ಮತಗಳೇ ನಿರ್ಣಾಯಕ. ಎಸ್‌ಸಿ/ಎಸ್‌ಟಿ ಸಮುದಾಯದವರು 45 ಸಾವಿರ ಇದ್ದರೆ, ಬಂಜಾರ ಸಮುದಾಯ 35 ಸಾವಿರದಷ್ಟು ಇದ್ದಾರೆ. ಇನ್ನು, ಮುಸ್ಲಿಂ ಸಮುದಾಯದವರು 30 ಸಾವಿರ, ಕುರುಬರು 25 ಸಾವಿರ ಇದ್ದು, ಇತರೆ ಸಮುದಾಯದವರು 10 ಸಾವಿರ ಇದ್ದಾರೆ.












Click it and Unblock the Notifications