ಕಲಬುರಗಿಯಲ್ಲಿ ಮೂರು ಹೊಸ ಆಸ್ಪತ್ರೆಗಳ ನಿರ್ಮಾಣ: ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್
ಕಲಬುರಗಿ, ಜೂನ್. 01: ಕಲಬುರಗಿ ಜಿಲ್ಲೆಯು ಮೂರು ಆಸ್ಪತ್ರೆಗಳನ್ನು ಪಡೆಯಲಿದೆ. ಈ ಟ್ರಾಮಾ ಸೆಂಟರ್, ವಿಶೇಷ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯೊಂದಿಗೆ ಜಿಲ್ಲೆಯು ಹೆಲ್ತ್‌ಕೇರ್ ಹಬ್ ಆಗಲಿದೆ ಎಂದು ನೂತನ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಶರಣಪ್ರಕಾಶ ಪಾಟೀಲ್, ನಗರದಲ್ಲಿ ಈಗಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಪಕ್ಕದಲ್ಲಿ ಲಭ್ಯವಿರುವ ಒಂದು ಎಕರೆ ಜಾಗವನ್ನು ಈ ಭಾಗದ ಜನರಿಗೆ ಅನುಕೂಲವಾಗುವ ಎಲ್ಲ ಮೂರು ಆಸ್ಪತ್ರೆಗಳನ್ನು ಸ್ಥಾಪಿಸಲು ಬಳಸಿಕೊಳ್ಳಲಾಗುವುದು. ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಯೋಜನೆಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರು 10 ಅಂಶಗಳ ಕಾರ್ಯಕ್ರಮ ರೂಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲ 10 ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯ ಕೊರತೆಯಿಂದ ರೋಗಿಯೊಬ್ಬರು ಸಾವನ್ನಪ್ಪಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಶರಣಪ್ರಕಾಶ ಪಾಟೀಲ್, ಸಮರ್ಪಕ ಆಮ್ಲಜನಕ ಪೂರೈಕೆಗೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಕಿದ್ವಾಯಿ ಆಸ್ಪತ್ರೆಗೆ ಆಮ್ಲಜನಕ ಸ್ಥಾವರವನ್ನು ಸಹ ಸ್ಥಾಪಿಸಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.
ಇನ್ನು, ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ-ಬೆಂಗಳೂರು ನಡುವೆ 2 ಮತ್ತು ಬೀದರ್-ಬೆಂಗಳೂರು ನಡುವೆ 1 ಹೊಸ ರೈಲನ್ನು ಆರಂಭಿಸಬೇಕು ಎಮದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆದಿದ್ದಾರೆ. ಹೊಸ ರೈಲು ಏಕೆ ಬೇಕು? ಎಂದು ಕಾರಣಗಳನ್ನು ಸಹ ಅವರು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ರದಲ್ಲಿ ಕಲಬುರಗಿ ಮತ್ತು ಬೀದರ್‌ನಿಂದ ಬೆಂಗಳೂರು ನಗರಕ್ಕೆ ಸಂಚಾರ ನಡೆಸುವ ಜನರ ಸಂಖ್ಯೆಯ ಕುರಿತು ಸಚಿವರ ಗಮನ ಸೆಳೆದಿದ್ದು, ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿದಿನ ಸುಮಾರು 6 ಸಾವಿರ ಜನರು ಪ್ರಯಾಣಿಸುತ್ತಾರೆ. ಇವರಲ್ಲಿ ಬಹುತೇಕರು ವಲಸೆ ಕೂಲಿ ಕಾರ್ಮಿಕರು ಎಂದು ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications