ಕಲಬುರಗಿ; ಮಳೆಯಿಂದ ಬೆಳೆ ಹಾನಿ, ರೈತರಿಗೆ ಸಿಗಲಿದೆ ಪರಿಹಾರ
ಕಲಬುರಗಿ, ಜುಲೈ 31; ಜೂನ್‌ನಲ್ಲಿ ನಾಪತ್ತೆಯಾಗಿದ್ದ ಮಳೆರಾಯ ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಅಬ್ಬರಿಸಿದ್ದಾನೆ. ಇದರಿಂದಾಗಿ ಹಲವಾರು ಜಿಲ್ಲೆಗಳಲ್ಲಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಕಲಬುರಗಿಯಲ್ಲಿಯೂ ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಭಾನುವಾರ ಚಿತ್ತಾಪುರ ತಾಲೂಕಿನ ಗುಂಡಗುರ್ತಿಯಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರು. ಬೆಳೆ ಹಾನಿಯಾದ ರೈತರಿಗೆ ಎನ್. ಡಿ. ಆರ್. ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆಯ ಸಹಾಯಕ ಆಯುಕ್ತ ಅಶಪ್ಪ, ತಾಲೂಕ ಪಂಚಾಯತ್ ಇಓ ಚೆನ್ನಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಸರ್ವೆ ನಂಬರ್ 5/3 ರಲ್ಲಿನ ಶ್ಯಾಮರಾವ ನಾಗಪ್ಪ ಕುಸನೂರು ಇವರ 1-22 ಎಕರೆ ಜಮೀನನಲ್ಲಿ ಬೆಳೆಯಲಾದ ತೊಗರಿ, ಉದ್ದು ಹಾಗೂ ಸರ್ವೆ ನಂ.5/1/2 ರಲ್ಲಿನ ಲಲಿತಾ ಚಂದ್ರಶೇಖರ ಇವರ 3-39 ಎಕರೆ ಪ್ರದೇಶದಲ್ಲಿ ಬೆಳೆಯಲಾದ ಉದ್ದು ಬೆಳೆ ಮಳೆಗೆ ಹಾನಿಯಾಗಿರುವ ಬಗ್ಗೆ ವೀಕ್ಷಣೆ ಮಾಡಿದರು.
ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ ಕುಮಾರ್ ಪಾಂಡೆ ಕಲಬುರಗಿ ಜಿಲ್ಲಾಡಳಿತ ಜೊತೆ ಗುರುವಾರ ಸಭೆ ನಡೆಸಿದ್ದರು. ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು.
ಕಂದಾಯ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಶಿಕ್ಷಣ, ಜೆಸ್ಕಾಂ, ಪೌರ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹೀಗೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ನಿರ್ದೇಶನ ನೀಡಿದ್ದರು.
ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜುಲೈ 26 ರಿಂದ 28 ವರೆಗೆ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ ಮಳೆಯಿಂದ ಬೆಳೆ ಹಾನಿಯಾಗಿರುವ ಸಾಧ್ಯತೆ ಇರುವ ಕಾರಣ ಬೆಳೆ ವಿಮೆ ಮಾಡಿಸಿದ ರೈತರು ದೂರು ದಾಖಲಿಸಲು ಯೂನಿವರ್ಸಲ್ ಸೊಂಪೂ ಜನರಲ್ ಇನ್ಶುರೆನ್ಸ್ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800-200-5142ಗೆ ಸಂಪರ್ಕಿಸಿದಾಗ ತಾಂತ್ರಿಕ ತೊಂದರೆ ಕಂಡು ಬಂದಿದೆ. ಆದ್ದರಿಂದ ರೈತರು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜುಲೈ 31 ರೊಳಗೆ ಲಿಖಿತ ದೂರು ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಮಳೆಯಿಂದ ಮನೆಗೆ ಹಾನಿ; ಜಿಲ್ಲಾಧಿಕಾರಿಗಳು ಗುಂಡಗುರ್ತಿ ಗ್ರಾಮದಲ್ಲಿ ಕಮಲಾಬಾಯಿ ಬಸವರಾಜ ಎಂಬುವವರ ಮನೆ ಮಳೆಗೆ ಹಾನಿಯಾದ ಬಗ್ಗೆ ಪರಿಶೀಲಿಸಿದರು. ಮನೆ ವೀಕ್ಷಿಸಿ ಕೂಡಲೇ ಪರಿಹಾರ ನೀಡುವಂತೆ ತಹಶೀಲ್ದಾರ್ ಶಿವರಾಜಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉರ್ದು ಶಾಲೆಗೂ ಅವರು ಭೇಟಿ ನೀಡಿದರು.
ಜಿಲ್ಲಾಧಿಕಾರಿಗಳು ದಂಡೋತಿ ಗ್ರಾಮದಲ್ಲಿ ಕಾಗಿಣಾ ನದಿದೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ವೀಕ್ಷಿಸಿದರು. ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಕೂಡಲೆ ಸೇತುವೆ ದುರಸ್ತಿ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದರು.
ಹಳೇ ಸೇತುವೆ ಪಕ್ಕದಲ್ಲಿ ಕೆ. ಆರ್. ಐ. ಡಿ. ಎಲ್. ಸಂಸ್ಥೆಯಿಂದ ನಿರ್ಮಿಸಲಾದ ಹೊಸ ಸೇತುವೆ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಸಂಗಾವಿ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜು ಸಹ ವೀಕ್ಷಣೆ ಮಾಡಿದರು.
ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜೂನ್ 1ರಿಂದ ಇಲ್ಲಿಯ ತನಕ ಜಿಲ್ಲೆಯಲ್ಲಿ ಸುರಿದ ಮಳೆಯಿಂದ 283 ಮನೆಗಳು ಭಾಗಶ: ಹಾನಿಗೊಂಡಿದ್ದು, ಹಾನಿಯಾದ ಮನೆಗಳ ಕುರಿತು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ.
20 ಕಿ.ಮೀ. ರಾಜ್ಯ ಹೆದ್ದಾರಿ, 27.50 ಕಿ.ಮೀ. ಜಿಲ್ಲಾ ಹೆದ್ದಾರಿ, 100 ಕಿ.ಮೀ. ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿ.ಮೀ. ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ ಕೇಂದ್ರಗಳು ಸಹ ಹಾನಿಗೊಂಡಿವೆ.
ಜಿಲ್ಲೆಯಾದ್ಯಂತ 281 ವಿದ್ಯುತ್ ಕಂಬಗಳು, 35 ಟ್ರಾನ್ಸ್ಫಾರ್ಮರ್‌ಗಳು ಹಾನಿಗೊಂಡಿದ್ದು, ಈ ಪೈಕಿ ಕ್ರಮವಾಗಿ 203 ವಿದ್ಯುತ್ ಕಂಬಗಳು ಮತ್ತು 31 ಟ್ರಾನ್ಸ್ಫಾರ್ಮರ್‌ಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಪೂರೈಕೆಗೆ ಅವಕಾಶ ಮಾಡಿಕೊಡಲಾಗಿದೆ.












Click it and Unblock the Notifications