ಕಲಬುರಗಿ; ಮತ್ತೆ ಕೋವಿಡ್ ಪತ್ತೆ, ಅಂತರಾಜ್ಯ ಪ್ರಯಾಣಿಕರಿಗೆ ಸೂಚನೆ
ಕಲಬುರಗಿ, ಮಾರ್ಚ್ 14; ಕಲಬುರಗಿ ಜಿಲ್ಲೆಯ ಶಹಾಬಾದ ಪಟ್ಟಣದಲ್ಲಿ ಮತ್ತೆ ಕೋವಿಡ್ ಸೋಂಕು ಕಂಡುಬಂದಿದೆ. ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಇತ್ತೀಚೆಗೆ ಮಹಾರಾಷ್ಟ್ರ, ಕೇರಳ ರಾಜ್ಯದಿಂದ ತಾಲೂಕಿಗೆ ವಾಪಸ್ ಆದವರು ಮಾಹಿತಿ ಕೊಡಬೇಕು ಎಂದು ಸೂಚನೆ ನೀಡಲಾಗಿದೆ.
ಶಹಾಬಾದ ತಹಶೀಲ್ದಾರ್ ಸುರೇಶ ವರ್ಮಾ ಈ ಕುರಿತು ಹೇಳಿಕೆ ನೀಡಿದ್ದು, "ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ ಏರುತ್ತಿದ್ದು, ಕೋವಿಡ್ ಎರಡನೇ ಅಲೆಯ ಮುನ್ಸೂಚನೆಯಾಗಿದೆ. ಸೋಂಕು ನಮ್ನಿಂದ ಇನ್ನೂ ದೂರವಾಗಿಲ್ಲ ಎಂಬುದನ್ನು ಜನರು ಮರೆಯಬಾರದು" ಎಂದಿದ್ದಾರೆ.
"ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಹಾಗೂ ಆಗಾಗ ಸಾಬೂನು, ಹ್ಯಾಂಡ್ ಸ್ಯಾನಿಟೈಸರ್‌ನಿಂದ ಕೈ ತೊಳೆಯುವುದನ್ನು ಬಿಡಬಾರದು" ಎಂದು ಅವರು ಸಲಹೆ ನೀಡಿದ್ದಾರೆ.

ಕೆಮ್ಮು, ನೆಗಡಿ, ಜ್ವರ, ತೀವ್ರತರಹದ ಮೈಕೈ ನೋವಿನ ಲಕ್ಷಣ ಕಂಡುಬಂದಲ್ಲಿ ತಡ ಮಾಡದೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 277.
ಜಾತ್ರೆ, ಉರುಸ್ ನಿಷೇಧ; ಕೋವಿಡ್ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಈಗಾಗಲೇ ಜಿಲ್ಲೆಯಾದ್ಯಂತ ಜಾತ್ರೆ, ಉರುಸ್ ಗಳನ್ನು ನಿಷೇಧಿಸಿದ್ದಾರೆ.
ತಾಲೂಕಿನಲ್ಲಿ ಎಲ್ಲಿಯೂ ಜಾತ್ರೆ, ಉರುಸ್ ಆಯೋಜಿಸುವಂತಿಲ್ಲ. ಇದನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಅನಿವಾರ್ಯ ಎಚ್ಚರಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಶನಿವಾರ 35 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 22,338ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಸರ್ಕಾರ 1 ರಿಂದ 5ನೇ ತರಗತಿ ವರೆಗಿನ ಶಾಲೆಗಳನ್ನು ತೆರೆಯಲು ಇನ್ನು ಅನುಮತಿ ನೀಡಿಲ್ಲ. ಹೀಗಿರುವಾಗ ಶಾಲೆ ತೆರೆದು ಮಕ್ಕಳಿಗೆ ಶಾಲೆಗೆ ಬರುವಂತೆ ಒತ್ತಾಯ ಮಾಡಿದಲ್ಲಿ ಅಂತವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ಎಚ್ಚರಿಸಲಾಗಿದೆ.












Click it and Unblock the Notifications