Baburao Chinchansur Accident: ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು
ಕಲಬುರಗಿ , ಏಪ್ರಿಲ್. 15: ಮಾಜಿ ಸಚಿವ, ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಶುಕ್ರವಾರಾ ರಾತ್ರಿ 12:30 ರ ಸುಮಾರಿಗೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ಅಪಘಾತ ಸಂಭವಿದೆಮ ಎಂದು ವರದಿಯಾಗಿದೆ.
ಅಪಘಾತದಲ್ಲಿ ಬಾಬುರಾವ್ ಚಿಂಚನಸೂರ್ ಅವರ ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. ಗಾಯಾಳು ಬಾಬುರಾವ್ ಚಿಂಚನಸೂರ್ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ನಿದ್ದೆಯ ಮಂಪರಿನಲ್ಲಿದ್ದ ವಾಹನ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ.

ನಿದ್ದೆಯ ಮಂಪರಿನಲ್ಲಿದ್ದ ಚಾಲಕ ರಸ್ತೆಯ ಮಧ್ಯೆ ಇರುವ ಗುಂಡಿಯನ್ನು ನೋಡದೆ ಕಾರು ಚಲಾಯಿಸಿದ ಕಾರಣ ಗುಂಡಿಯಲ್ಲಿ ಸಿಲುಕಿ ಸ್ಕಿಡ್ ಆಗಿದೆ. ಹೀಗಾಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಕಾರು ಬಿದ್ದ ರಭಸಕ್ಕೆ ಬಾಬುರಾವ್ ಚಿಂಚನಸೂರ್ ಅವರ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ. ಘಟನೆಯಲ್ಲಿ ಚಾಲಕ ಮತ್ತು ಗನ್ಮ್ಯಾನ್ಗೆ ಯಾವುದೇ ಗಾಯಗಳಾಗಿಲ್ಲ.
ಘಟನೆ ಬಳಿಕ ಸ್ಥಳೀಯರ ಸಹಾಯದಿಂದ ಬಾಬುರಾವ್ ಚಿಂಚನಸೂರ್ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿರುವ ಬಾಬುರಾವ್ ಚಿಂಚನಸೂರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ. ಶುಕ್ರವಾರ ಚುನಾವಣಾ ಪ್ರಚಾರ ಮುಗಿಸಿ ಯಾದಗಿರಿಯಿಂದ ಕಲಬುರಗಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರ್ನಲ್ಲಿ ಇಬ್ಬರು ಚಾಲಕರು, ಓರ್ವ ಗನ್ ಮ್ಯಾನ್ ಸೇರಿದಂತೆ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಾಬುರಾವ್ ಚಿಂಚನಸೂರ್ ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮೊದಲ ಬಾರಿಗೆ ಇಲ್ಲಿ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ.
ಇತ್ತೀಚೆಗಷ್ಟೇ ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ, ಬಾಬುರಾವ್ ಚಿಂಚನಸೂರ್ ವಿಧಾನ ಪರಿಷತ್ ಸದಸ್ಯರಾಗಿ ಒಂದೂವರೆ ವರ್ಷಗಳ ಕಾಲ ಅಧಿಕಾರ ಬಾಕಿ ಇದ್ದರು, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ.












Click it and Unblock the Notifications