Breaking; ಪರಾರಿಯಾಗಿರುವ ರುದ್ರಗೌಡ ಪಾಟೀಲ್‌ಗೆ ಸಿಐಡಿ ನೋಟಿಸ್
ಕಲಬುರಗಿ, ಜನವರಿ 22; ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್‌ಗೆ ನೋಟಿಸ್ ನೀಡಿದೆ. ಜನವರಿ 18ರಂದು ಸಿಐಡಿ ಪೊಲೀಸರು ಬಂಧಿಸಲು ಬಂದಾಗ ಆತ ಪರಾರಿಯಾಗಿದ್ದಾನೆ.
ಕಲಬುರಗಿ ಸಿಐಡಿ ಘಟಕದ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಭಾನುವಾರ ರುದ್ರಗೌಡ ಪಾಟೀಲ್‌ಗೆ ನೋಟಿಸ್ ನೀಡಿದ್ದಾರೆ. ಜನವರಿ 23ರಂದು ಕಲಬುರಗಿ ಸಿಐಡಿ ಕಚೇರಿಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.
ರುದ್ರಗೌಡ ಪಾಟೀಲ್ ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್ ಪಿನ್. ಜನವರಿ 18ರ ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಲು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ನಿವಾಸಕ್ಕೆ ಸಿಐಡಿ ಪೊಲೀಸರು ತೆರಳಿದ್ದರು.

ಆಗ ಪಿಎಸ್‌ಐ ಆನಂದ್ ತಳ್ಳಿ ಆರೋಪಿ ರುದ್ರಗೌಡ ಪಾಟೀಲ್ ಪರಾರಿಯಾಗಿದ್ದಾನೆ. ಭಾನುವಾರವೂ ಆತನ ಪತ್ತೆಯಾಗದ ಹಿನ್ನಲೆಯಲ್ಲಿ ಸಿಐಡಿ ಪೊಲೀಸರು ನೋಟಿಸ್ ನೀಡಿ, ಸೋಮವಾರ ವಿಚಾರಣೆಗೆ ಬರಲು ಸೂಚನೆ ನೀಡಿದ್ದಾರೆ.
ಆರೋಪಿ ರುದ್ರಗೌಡ ಮನೆ ಮೇಲೆ ಗುರುವಾರ ಇಡಿ ಅಧಿಕಾರಿಗಳು ಸಹ ದಾಳಿ ಮಾಡಿದ್ದರು. ತುಮಕೂರು ಠಾಣೆಯಲ್ಲಿ ರುದ್ರಗೌಡ ವಿರುದ್ಧ ದೂರು ದಾಖಲಾಗಿತ್ತು. ಈ ದೂರಿನ ವಿಚಾರಣೆ ನಡೆಸಲು ಪೊಲೀಸರು ಆತನನ್ನು ಬಂಧಿಸಲು ಕಲಬುರಗಿಗೆ ಆಗಮಿಸಿದ್ದರು.
ಈ ಸಮಯದಲ್ಲಿ ಆರೋಪಿ ರುದ್ರಗೌಡ ಪರಾರಿಯಾಗಿದ್ದ. ಈ ಕುರಿತು ಸಿಐಡಿ ಪೊಲೀಸರು ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಕೆ ಮಾಡಿದ್ದಾರೆ. ಆದರೆ ಇನ್ನೂ ಆತ ಪತ್ತೆಯಾಗಿಲ್ಲ.
ರುದ್ರಗೌಡ ಪಾಟೀಲ್ ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದ ಬಳಿಕ ಪರಾರಿಯಾಗಿದ್ದ. ಬಳಿಕ ಸಿಐಡಿ ಪೊಲೀರು ಪುಣೆಯಲ್ಲಿ ಆತನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಆತ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ, ಪದೇ ಪದೇ ವಿಚಾರಣೆಗೆ ಗೈರಾಗುತ್ತಿದ್ದಾನೆ ಎಂಬುದು ಆರೋಪ.
ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಬ್ಲೂಟುಥ್ ಡಿವೈಸ್ ನೀಡಿ, ಅವರಿಂದ ಹಣ ಪಡೆದು ಅಕ್ರಮ ಎಸಗಲು ಸಹಕಾರ ನೀಡಿದ ಗಂಭೀರ ಆರೋಪ ರುದ್ರಗೌಡ ಪಾಟೀಲ್ ಮೇಲೆ ಇದೆ. ಈ ಪ್ರಕರಣದಲ್ಲಿ ಅಕ್ರಮ ಹಣದ ವ್ಯವಹಾರ ನಡೆದ ಆರೋಪದ ಹಿನ್ನಲೆಯಲ್ಲಿ ಇಡಿ ಸಹ ಪ್ರಕರಣದ ತನಿಖೆ ಕೈಗೊಂಡಿದೆ.












Click it and Unblock the Notifications