ಚಿಂಚೋಳಿ ಉಪ ಚುನಾವಣಾ ಕಣ : ಪಕ್ಷಗಳ ಬಲಾಬಲ
ಕಲಬುರಗಿ, ಮೇ 08 : ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದೆ. ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಮೇ 19ರಂದು ಮತದಾನ ನಡೆಯಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿಗೆ ಚಿಂಚೋಳಿ ಉಪ ಚುನಾವಣೆ ಪ್ರತಿಷ್ಠೆಯಾಗಿದೆ. ಅದರಲ್ಲೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಉಮೇಶ್ ಜಾಧವ್ ನಡುವಿನ ಹೋರಾಟ ಈ ಉಪ ಚುನಾವಣೆ. ಡಾ.ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್‌ರನ್ನು ಕಣಕ್ಕಿಳಿಸಿದ್ದಾರೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಡಾ.ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಆದ್ದರಿಂದ, ಉಪ ಚುನಾವಣೆ ಎದುರಾಗಿದೆ. ಉಪ ಚುನಾವಣೆಯಲ್ಲಿ ಪುತ್ರನನ್ನು ಕಣಕ್ಕಿಳಿಸುವ ಮೂಲಕ ಅವರು ಕುಟುಂಬ ರಾಜಕಾರಣ ಆರಂಭಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಸುಭಾಷ್ ರಾಥೋಡ್ ಅವರು ಅಭ್ಯರ್ಥಿ. ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಅಭ್ಯರ್ಥಿ ಗೆಲ್ಲಿಸಲು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ.

ಮೇ 19ರಂದು ಮತದಾನ
ಮೇ 19ರಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ ಒಟ್ಟು 1,93,869 ಜನರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 94,806 ಮಹಿಳೆಯರು, 99,094 ಪುರುಷರು. ತೃತೀಯ ಲಿಂಗಿಗಳು 16.

ಸುಭಾಷ್ ರಾಥೋಡ್ ಪ್ಲಸ್ ಪಾಯಿಂಟ್
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕರು. ಉಮೇಶ್ ಜಾಧವ್ ಪಕ್ಷಾಂತರ ಮಾಡಿದ್ದು ಅವರ ಪ್ಲಸ್ ಪಾಯಿಂಟ್. ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ರಾಜಕೀಯಕ್ಕೆ ಹೊಸಬರು. ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರ ಬೆಂಬಲ ಅವರಿಗೆ ಇದೆ.
ಪ್ರಚಾರದಿಂದ ಕೆಲವು ಕಾಂಗ್ರೆಸ್ ನಾಯಕರು ದೂರವಾಗಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿ ಆತಂರಿಕ ಕಲಹವಿದೆ. ಬಿಜೆಪಿ ನಾಯಕರು ಕ್ಷೇತ್ರದಲ್ಲಿ ಬೀಡು ಬಿಟ್ಟು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇವು ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.

ಅವಿನಾಶ್ ಜಾಧವ್ ಪ್ಲಸ್ ಪಾಯಿಂಟ್
ಡಾ.ಉಮೇಶ್ ಜಾಧವ್ ಕ್ಷೇತ್ರದಲ್ಲಿ ಹೊಂದಿರುವ ಹಿಡಿತವೇ ಪುತ್ರ ಅವಿನಾಶ್ ಜಾಧವ್ ಅವರಿಗೆ ಪ್ಲಸ್ ಪಾಯಿಂಟ್. ಲೋಕಸಭಾ ಚುನಾವಣೆ ಸಮಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಆದ್ದರಿಂದ, ಮೋದಿ ಅಲೆ ಕೆಲಸ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಬಿಜೆಪಿ ಟಿಕೆಟ್ ವಂಚಿತ ನಾಯಕರು ಅಸಮಾಧಾನಗೊಂಡಿದ್ದಾರೆ. ರಾಜಕೀಯಕ್ಕೆ ಹೊಸಬರು ಎಂಬುದು ಚುನಾವಣೆಯಲ್ಲಿ ಅವಿನಾಶ್ ಜಾಧವ್ ಅವರಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.

2018ರ ಫಲಿತಾಂಶ
2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ.ಉಮೇಶ್ ಜಾಧವ್ 73,905 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಸುನೀಲ್ ವಲ್ಯಾಪುರೆ ಅವರು 54,693 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಿದೆ. ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ಘೋಷಣೆ ಮಾಡಿದೆ.

ಕಾಂಗ್ರೆಸ್‌ಗೆ ಪ್ರತಿಷ್ಠೆ
2018ರ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರು. ಆದ್ದರಿಂದ, ಉಪ ಚುನಾವಣೆಯಲ್ಲಿ ಗೆದ್ದು ಕ್ಷೇತ್ರವನ್ನು ಉಳಿಸಿಕೊಳ್ಳಬೇಕಿದೆ ಕಾಂಗ್ರೆಸ್.












Click it and Unblock the Notifications