ಸಿದ್ದರಾಮಯ್ಯ ಬಿಜೆಪಿಗೆ; ಕೇಂದ್ರ ಸಚಿವ ಸ್ಥಾನ!
ಕಲಬುರಗಿ, ಮಾರ್ಚ್ 06 : "ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸೇರಿದರೆ ಕೇಂದ್ರ ಸಚಿವರಾಗಲಿದ್ದಾರೆ. ಅವರನ್ನು ಪಕ್ಷಕ್ಕೆ ನಾನು ಸ್ವಾಗತಿಸುತ್ತೇನೆ" ಎಂದು ಮಾಜಿ ಸಚಿವ ಬಾಬೂರಾವ್ ಚಿಂಚನಸೂರ ಹೇಳಿದರು.
ಶುಕ್ರವಾರ ಕಲಬುರಗಿಯಲ್ಲಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬಿಜೆಪಿ ನಾಯಕ ಬಾಬೂರಾವ್ ಚಿಂಚನಸೂರ ಮಾಧ್ಯಮಗಳ ಜೊತೆ ಮಾತನಾಡಿದರು. "ಕಾಂಗ್ರೆಸ್‌ಗೆ ರಾಜ್ಯ ಮತ್ತು ಕೇಂದ್ರದಲ್ಲಿ ನಾಯಕತ್ವ ಇಲ್ಲ" ಎಂದರು.
"ಕಾಂಗ್ರೆಸ್ ಪಕ್ಷ ದೇಶ ಮತ್ತು ರಾಜ್ಯದಲ್ಲಿ ಹೀನಾಯ ಸ್ಥಿತಿಯಲ್ಲಿದೆ. ಇನ್ನು 20 ವರ್ಷ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ" ಎಂದು ಬಾಬೂರಾವ್ ಚಿಂಚನಸೂರ ಭವಿಷ್ಯ ನುಡಿದರು.
2013ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಬಾಬೂರಾವ್ ಚಿಂಚನಸೂರ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. 2019ರ ಲೋಕಸಭಾ ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಕಾಂಗ್ರೆಸ್ ಸ್ಥಿತಿ ಹೇಗಿದೆ?
"ಕರ್ನಾಟಕ ಕಾಂಗ್ರೆಸ್‌ನಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಜಿ. ಪರಮೇಶ್ವರ ಕಂಡರೆ ಸಿದ್ದರಾಮಯ್ಯಗೆ ಆಗುವುದಿಲ್ಲ. ಹಾಗೆಯೇ ಈ ಇಬ್ಬರೂ ನಾಯಕರಿಗೆ ಸಿದ್ದರಾಮಯ್ಯ ಕಂಡರೆ ಆಗುವುದಿಲ್ಲ" ಎಂದು ಬಾಬೂರಾವ್ ಚಿಂಚನಸೂರ ಹೇಳಿದರು.

ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ
"ಸಿದ್ದರಾಮಯ್ಯ ರಾಜ್ಯದಲ್ಲಿ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ಅವರು ಬಿಜೆಪಿ ಸೇರಿದರೆ ನಾನು ಸ್ವಾಗತಿಸುತ್ತೇನೆ. ಬಿಜೆಪಿಗೆ ಬಂದರೆ ಅವರು ಕೇಂದ್ರದಲ್ಲಿ ಸಚಿವರಾಗುತ್ತಾರೆ" ಎಂದು ಚಿಂಚನಸೂರ ಹೇಳಿದರು.

ಹೈಕಮಾಂಡ್ ಅನುಮತಿ ಬೇಕು
"ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ಗೆ ನಾಯಕತ್ವ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಶಾಸಕರ ಸೇರ್ಪಡೆಗೆ ಹೈಕಮಾಂಡ್ ಅನುಮತಿ ಕೊಟ್ಟರೆ ಆ ಎರಡೂ ಪಕ್ಷಗಳು ವೈಟ್ ವಾಶ್ ಆಗಲಿವೆ" ಎಂದು ಚಿಂಚನಸೂರ ಹೇಳಿದರು.

ಹೊಸ ಬಾಂಬ್ ಸಿಡಿಸಿದರು
"ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಬಿಜೆಪಿ ಸೇರಲು ಬಯಸಿದ್ದಾರೆ. ಬೀದರ್ ಶಾಸಕರೊಬ್ಬರನ್ನು ನಾನೇ ಖುದ್ದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೇನೆ" ಎಂದು ಚಿಂಚನಸೂರು ಹೊಸ ಬಾಂಬ್ ಸಿಡಿಸಿದರು.












Click it and Unblock the Notifications