ಅಂದೋಲಾ ಮಠದ ಸ್ವಾಮೀಜಿ ಬಂಧನ, ಕಲ್ಲು ತೂರಾಟ, ಪೊಲೀಸರಿಗೆ ಗಾಯ
Recommended Video

ಕಲಬುರಗಿ, ಅಕ್ಟೋಬರ್ 31: ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಕರಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯನ್ನು ಕೊಲೆಯತ್ನಕ್ಕೆ ಪ್ರಚೋದನೆ ಆರೋಪದಲ್ಲಿ ಬಂಧಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜೇವರ್ಗಿ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದು, ಅವರು ಶ್ರೀರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಕೂಡಾ ಆಗಿದ್ದಾರೆ. ಇದೇ ತಿಂಗಳು ಹದಿನಾಲ್ಕರಂದು ಆಂದೋಲಾ ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಅಂಗಡಿಗಳ ತೆರವು ಸಂಬಂಧ ಗಲಾಟೆಯಾಗಿತ್ತು. ಘಟನೆಯಲ್ಲಿ ನಸಿರುದ್ದೀನ್ ಎಂಬಾತ ಗಾಯಗೊಂಡಿದ್ದ.

ಈ ಘಟನೆಗೆ ಸ್ವಾಮೀಜಿ ಪ್ರಚೋದನೆಯೇ ಕಾರಣ ಎಂದು ನಸಿರುದ್ದೀನ್ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಆದರೆ ಬಂಧನದ ಕ್ರಮ ಖಂಡಿಸಿ ಗ್ರಾಮಸ್ಥರು ಹಾಗೂ ಬೆಂಬಲಿಗರು, ಅಭಿಮಾನಿಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೊಂದು ಕಡೆ ಸ್ವಾಮೀಜಿಯನ್ನು ಹಿಂಬಾಲಿಸಿ ಗುಂಪು ಗುಂಪಾಗಿ ಬರುತ್ತಿದ್ದ ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇದರಿಂದ ಮತ್ತೂ ಆಕ್ರೋಶಗೊಂಡ ಜನರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಹೆಚ್ಚುವರಿ ಎಸ್.ಪಿ ಸೇರಿ ಐವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ ಎರಡು ಪೊಲೀಸ್ ವಾಹನಗಳು ಜಖಂ ಆಗಿವೆ ಎಂದು ಎಸ್.ಪಿ ಶಶಿಕುಮಾರ್ ತಿಳಿಸಿದ್ದಾರೆ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಬಂಧಿಸಿದ ನಂತರ ಜೇವರ್ಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ಸ್ವಾಮೀಜಿಯನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸದ್ಯಕ್ಕೆ ಸ್ವಾಮೀಜಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಸ್ವಾಮೀಜಿ ಬೆಂಬಲಿಗರು ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುವ ಸಾದ್ಯತೆ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಜೇವರ್ಗಿ ಬಂದ್ ಕರೆ ಕೊಡುವ ಸಾಧ್ಯತೆ ಕೂಡ ಇದೆ.












Click it and Unblock the Notifications