ರಾಜಸ್ಥಾನದಲ್ಲಿ ಶಾಸಕರ ಖರೀದಿ; ಎರಡು ರಾಜ್ಯಗಳ ಪೊಲೀಸರಿಗೆ ಪತ್ರ
ಜೈಪುರ, ಜುಲೈ 21 : ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಶಾಸಕರ ಖರೀದಿ ನಡೆದಿದೆ ಎಂಬ ಆರೋಪದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಗೆ ಸಹಕಾರ ನೀಡಬೇಕು ಎಂದು ರಾಜಸ್ಥಾನ ಪೊಲೀಸರು ಹರ್ಯಾಣ ಮತ್ತು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಸಚಿನ್ ಪೈಲೆಟ್ ಬಣದ ಶಾಕಸರು ವಾಸ್ತವ್ಯ ಹೂಡಿದ್ದಾರೆ ಎನ್ನಲಾದ ಹರ್ಯಾಣದ ಮಾನೇಸರ್‌ನ ಐಷಾರಾಮಿ ರೆಸಾರ್ಟ್ ಪ್ರವೇಶಿಸಲು ಎರಡು ಬಾರಿ ರಾಜಸ್ಥಾನ ಪೊಲೀಸರು ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಹರ್ಯಾಣ ಪೊಲೀಸರ ಸಹಕಾರ ಸಿಗದೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಮತ್ತೊಂದು ಕಡೆ ಸರ್ಕಾರ ಪತನಗೊಳಿಸುವ ಸಂಚಿನ ಪ್ರಕರಣದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಅವರು ದೆಹಲಿಯಲ್ಲಿದ್ದಾರೆ.

ಆದ್ದರಿಂದ ರಾಜಸ್ಥಾನ ಪೊಲೀಸರು ಎರಡೂ ರಾಜ್ಯಗಳ ಪೊಲೀಸರಿಗೆ ಮಂಗಳವಾರ ಪತ್ರ ಬರೆದಿದ್ದು, ಈ ಪ್ರಕರಣ ತನಿಖೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರವಿಲ್ಲದೇ ಶಾಸಕರು ಇರುವ ರೆಸಾರ್ಟ್‌ಗೆ ರಾಜಸ್ಥಾನ ಪೊಲೀಸರು ಪ್ರವೇಶ ಮಾಡಲು ಆಗುವುದಿಲ್ಲ.
ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಬೆಂಬಲಿಸುವ ಶಾಸಕರು ಮಾನೇಸರ್‌ನ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ 2 ಬಾರಿ ರೆಸಾರ್ಟ್‌ಗೆ ಹೋಗಿರುವ ಪೊಲೀಸರು ಒಳಗೆ ಪ್ರವೇಶ ಮಾಡಲು ಅವಕಾಶ ಸಿಗದ ಕಾರಣ ವಾಪಸ್ ಬಂದಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ಶಾಸಕ ಭನ್ವರ್‌ಲಾಲ್ ಶರ್ಮಾ ಮತ್ತು ಕೇಂದ್ರ ಸಚಿವ ಶೇಖಾವತ್ ನಡುವೆ ನಡೆದ ಸಂಭಾಷಣೆಯ ಆಡಿಯೋ ಟೇಪ್‌ಗಳಿಗೆ ಸಂಬಂಧಿಸಿದಂತೆ ರಾಜಸ್ಥಾನದ ಎಸಿಬಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದೆ.












Click it and Unblock the Notifications