ಮಹಿಳೆಯ ಮಾಜಿ ಪ್ರಿಯತಮನ ಕತ್ತರಿಸಿ ಅಡುಗೆ ಮಾಡಿದ್ದು ಸುಳ್ಳು!
ಅಬುಧಾಬಿ, ನವೆಂಬರ್ 23 : ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯತಮನನ್ನೇ ಕೊಂದು ತುಂಡುತುಂಡು ಮಾಡಿ, ದೇಹದ ಭಾಗವನ್ನು ಬೇಯಿಸಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಬಡಿಸಿದ್ದಾಳೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದು ಅಬುಧಾಬಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಇಂಥ ಸುದ್ದಿಯನ್ನು ಯಾರೂ ನಂಬಬಾರದು, ಮಾಧ್ಯಮದವರೂ ಇಂಥ ಸುದ್ದಿ ಹಬ್ಬಿಸಬಾರದು, ಪೊಲೀಸರು ಕೂಡ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ಅಧಿಕಾರಿಗಳು ನೀಡಿದ ಹೇಳಿಕೆಯನ್ನು ಮಾತ್ರ ನಂಬಬೇಕಾಗಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಆ ಮಹಿಳೆ ತನ್ನ ಮಾಜಿ ಪ್ರಿಯತಮನನ್ನು ಕೊಂದಿರುವ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಆಕೆ ಕೆಲಸಗಾರರಿಗೆ ಅಡುಗೆ ಮಾಡಿ ಬಡಿಸಿರುವ ಸಂಗತಿ ಸತ್ಯಕ್ಕೆ ದೂರವಾದುದು, ಓದುಗರನ್ನು ದಾರಿ ತಪ್ಪಿಸುವಂಥದ್ದು. ಆಕೆ ಮಾಜಿ ಪ್ರಿಯಕರನ ದೇಹವನ್ನು ಕುಕ್ ಮಾಡಿಲ್ಲ, ಆದರೆ, ಮಾಧ್ಯಮದವರೇ ಸುಳ್ಳು ಸುದ್ದಿಯನ್ನು 'ಕುಕ್' (ಸುಳ್ಳು ಸುದ್ದಿ ಸೃಷ್ಟಿ) ಮಾಡಿದ್ದಾರೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.

ಇಂಥ ಸುಳ್ಳು ಸುದ್ದಿಗಳಿಂದ ತನಿಖೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ, ಇಂಥ ಸುದ್ದಿಗಳು ಜನರ ನಂಬಿಕೆಯ ಮೇಲೆ ಕೂಡ ಅಡ್ಡ ಪರಿಣಾಮ ಬೀರುತ್ತದೆ. ಇಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುವುದರಿಂದ ದೇಶದ ಭದ್ರತೆಯ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications